(ನ್ಯೂಸ್ ಕಡಬ) newskadaba.com, ಜೂ.25: 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯು ಭಾರತದ ಸಂವಿಧಾನದ ಮೇಲಿನ ನೇರ ದಾಳಿಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೂನ್ 25ರ ಕರಾಳ ದಿನದ ನೆನಪಿಗಾಗಿ ಆಚರಿಸಲಾಗುತ್ತಿರುವ ‘ಸಂವಿಧಾನ ಹತ್ಯಾ ದಿವಸ್’ ಅಂಗವಾಗಿ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಎಂದು ಬಣ್ಣಿಸಿದ ಪ್ರಧಾನಿ, ಆ ಸಂದರ್ಭದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಅಮಾನತು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಹಾಗೂ ರಾಜಕೀಯ ನಾಯಕರು ಮತ್ತು ಪತ್ರಕರ್ತರ ಬಂಧನವನ್ನು ಸ್ಮರಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ರಕ್ಷಣೆಗಾಗಿ ಹೋರಾಡಿದ ಪ್ರತಿಯೊಬ್ಬರಿಗೂ ಅವರು ಈ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದರು.
ಭಾರತದ ಸಂವಿಧಾನವು 140 ಕೋಟಿ ಜನರ ಆಶಯಗಳು ಮತ್ತು ಹಕ್ಕುಗಳನ್ನು ಪ್ರತಿಬಿಂಬಿಸುತ್ತದೆ ಎಂದ ಅವರು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಆಧಾರದ ಮೇಲೆ ದೇಶವನ್ನು ಮತ್ತಷ್ಟು ಬಲಪಡಿಸಲು ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ನಮ್ಮ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.







