(ನ್ಯೂಸ್ ಕಡಬ) newskadaba.com, ಮೇ.23” ಕಾಕ್ರೋಚ್ ಜನತಾ ಪಾರ್ಟಿ, ಸಾಮಾಜಿಕ ಜಾಲತಾಣದಲ್ಲಿನ ತನ್ನ ಓಟವನ್ನು ಮುಂದುವರಿಸಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್, ’ವ್ಯವಸ್ಥೆಯ ಮೇಲೆ ದಾಳಿ ಮಾಡುವವರನ್ನು ಉದ್ದೇಶಿಸಿ ಆಡಿದ್ದ ಜಿರಳೆಗಳು ಎಂಬ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ, ಸಿಜೆಪಿಯ ಸಾಮಾಜಿಕ ಅಭಿಯಾನ ಆರಂಭವಾಗಿತ್ತು.
ವ್ಯಂಗ್ಯಾತ್ಮಕ ಎಕ್ಸ್ (ಟ್ವಿಟ್ಟರ್) ಖಾತೆಯನ್ನು ತಕ್ಷಣದಿಂದಲೇ ನಿರ್ಬಂಧಿಸುವಂತೆ, ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಸೂಚಿಸಿತ್ತು. ಇದರ ಬೆನ್ನಲ್ಲೇ, ಗುಪ್ತಚರ ಇಲಾಖೆಯು ಕೆಲವೊಂದು ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ. ಐಬಿ ನೀಡಿದ ಎಚ್ಚರಿಕೆಯ ಹಿನ್ನಲೆಯಲ್ಲಿ ಈ ತುರ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ನಡುವೆ, ಕಾಕ್ರೋಚ್ ಜನತಾ ಪಾರ್ಟಿಯ ಮೇ 24ರ, ಬೆಂಗಳೂರಿನ ಟೌನ್’ಹಾಲ್ ಬಳಿ ಕರೆದಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ.
ಪಾಕಿಸ್ತಾನಕ್ಕೂ ತಟ್ಟಿದ ಭಾರತದ ಕಾಕ್ರೋಚ್ ಎಫೆಕ್ಟ್
ಕೇವಲ ನಾಲ್ಕೈದು ದಿನಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಇನ್ಸ್ಟಾಗ್ರಾಂ
ಫಾಲೋವರ್ಸ್ ಬಿಜೆಪಿ ಮತ್ತು ಕಾಂಗ್ರೆಸ್ ಪಾರ್ಟಿಯನ್ನು ಹಿಂದಿಕ್ಕಿದೆ. ಕಾಕ್ರೋಚ್ ಅಭಿಯಾನದ ಹಿಂದೆ ಯಾರಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಹಲವು ಸುದ್ದಿಗಳು ಬರುತ್ತಿದೆ. ಈಗ, ಕಾಕ್ರೋಚ್ ಎಫೆಕ್ಟ್ ಪಕ್ಕದ ಪಾಕಿಸ್ತಾನಕ್ಕೂ ತಟ್ಟಿದೆ. ಅಲ್ಲೂ, ಕಾಕ್ರೋಚ್ ಅವಾಮಿ ಪಾರ್ಟಿ ಹುಟ್ಟಿಕೊಂಡಿದೆ. ಭಾರತದ ಕಾಕ್ರೋಚ್ ಪಾರ್ಟಿಯಿಂದ ನಾವು ಸ್ಪೂರ್ತಿ ಪಡೆದುಕೊಂಡಿದ್ದೇವೆ ಎಂದು ಅವರ ಇನ್ಸ್ಟಾ ಬಯೋದಲ್ಲಿ ಬರೆಯಲಾಗಿದೆ.
ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆ
ಕಾಕ್ರೋಚ್ ಜನತಾ ಪಾರ್ಟಿಯು, ದೇಶದ ಭದ್ರತಾ ಸಂಸ್ಥೆಗಳ ತೀವ್ರ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಭಾರೀ ಜನಸಜ್ಜುಗೊಳಿಸುವಿಕೆ, ವಿದೇಶಿ ಹಸ್ತಕ್ಷೇಪ ಮತ್ತು ಸಂಘಟಿತ ಅಶಾಂತಿಗೆ ಕಾರಣವಾಗಲಿದೆ ಎಂದು ಗುಪ್ತಚರ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ತಕ್ಷಣದಿಂದಲೇ ನಿರ್ಬಂಧಿಸುವಂತೆ, ಗುಪ್ತಚರ ಇಲಾಖೆ, ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ನೀಡಿತ್ತು.









