ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ಅಗ್ರಿಕೋಲಾ ಪದಕ ಪ್ರದಾನ



(ನ್ಯೂಸ್‌ ಕಡಬ) newskadaba.com ಮೇ. 22. ಇತ್ತೀಚೆಗೆ ರೋಮ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(FAO)ಯ 2026ನೇ ಸಾಲಿನ ಪ್ರತಿಷ್ಠಿತ ಅಗ್ರಿಕೋಲಾ ಪದಕ ಪ್ರದಾನ ಮಾಡಲಾಯಿತು. ಆಹಾರ ಭದ್ರತೆ, ಸುಸ್ಥಿರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡಿದ ವಿಶಿಷ್ಟ ನಾಯಕತ್ವದ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಪ್ರಧಾನಿಗೆ ನೀಡಲಾಗಿದೆ.







ರೋಮ್‌ನಲ್ಲಿರುವ FAO ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ FAO ಮಹಾನಿರ್ದೇಶಕ ಕ್ಯೂ ಡೊಂಗ್ಯು ಅವರು ಪ್ರಧಾನಿ ಮೋದಿಗೆ ಪ್ರಶಸ್ತಿ ಪ್ರದಾನ ಮಾಡಿದರು.






ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ, ಈ ಗೌರವವನ್ನು ಭಾರತದ ರೈತರು, ಜಾನುವಾರು ಸಾಕಾಣಿಕೆದಾರರು, ಮೀನುಗಾರರು ಮತ್ತು ಕೃಷಿ ವಿಜ್ಞಾನಿಗಳಿಗೆ ಅರ್ಪಿಸಿದರು. “ಭಾರತದ ಆಹಾರ ಪೂರೈಕೆದಾರರ ಪರಿಶ್ರಮ ಮತ್ತು ಸಮರ್ಪಣೆಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಮಾನವ ಕಲ್ಯಾಣ, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಭಾರತದ ಬದ್ಧತೆಯ ಮನ್ನಣೆ ಇದಾಗಿದೆ” ಎಂದು ಹೇಳಿದರು.

ಸಮಾರಂಭದ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, FAO ನೀಡಿದ ಅಗ್ರಿಕೋಲಾ ಪದಕವನ್ನು ನಾನು ಭಾರತದ ರೈತರಿಗೆ ಸಮರ್ಪಿಸುತ್ತೇನೆ. ಅವರ ಅಹೋರಾತ್ರಿ ಪರಿಶ್ರಮವೇ ದೇಶದ ಆಹಾರ ಭದ್ರತೆಯ ಆಧಾರವಾಗಿದೆ ಎಂದು ತಿಳಿಸಿದ್ದಾರೆ. 

ಭಾರತದ ಕೃಷಿ ನೀತಿಗಳು “ಪ್ರತಿ ಹನಿಗೂ ಹೆಚ್ಚು ಬೆಳೆ” ಎಂಬ ತತ್ವದ ಆಧಾರದಲ್ಲಿ ರೂಪುಗೊಂಡಿವೆ ಎಂದು ಪ್ರಧಾನಿ ಹೇಳಿದರು. ಸೂಕ್ಷ್ಮ ನೀರಾವರಿ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡ್ರೋನ್‌ಗಳು ಮತ್ತು ದೂರ ಸಂವೇದಿ ತಂತ್ರಜ್ಞಾನಗಳು ಭಾರತೀಯ ರೈತರ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಅವರು ತಿಳಿಸಿದರು.

error: Content is protected !!
Scroll to Top