ಮಂಗಳೂರು ರೈಲ್ವೆ ಪ್ರದೇಶ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ: ಅಕ್ಟೋಬರ್ 1ರಿಂದ ಅಧಿಕೃತ ಜಾರಿ

(ನ್ಯೂಸ್‌ ಕಡಬ) newskadaba.com, ಸೆ. 12. ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ) ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, 2026ರ ಅಕ್ಟೋಬರ್ 1ರಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ.

ಸುಗಮ ಆಡಳಿತಾತ್ಮಕ ವರ್ಗಾವಣೆಯ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮನ್ವಯ ಸಭೆ ಮಂಗಳೂರಿನಲ್ಲಿ ನಡೆಯಿತು.ರೈಲು ಕಾರ್ಯಾಚರಣೆಯ ನಿಯಂತ್ರಣ ವ್ಯವಸ್ಥೆ, ದಾಖಲೆಗಳು ಹಾಗೂ ಮೂಲಸೌಕರ್ಯ/ಆಸ್ತಿಗಳ ಹಸ್ತಾಂತರದ ಕುರಿತು ಸಭೆಯಲ್ಲಿ ತಾಂತ್ರಿಕ ಚರ್ಚೆಗಳು ನಡೆದವು.

ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಜೆಟೆಡ್ ಅಲ್ಲದ ಸಿಬ್ಬಂದಿಯನ್ನು ‘ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ’ ವರ್ಗಾಯಿಸುವ ನಿಯಮವಿದ್ದರೂ, ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆ ಸೇರಲು ಅವಕಾಶ ಕಲ್ಪಿಸಲಾಗಿದೆ.ಆಡಳಿತಾತ್ಮಕ ಬದಲಾವಣೆಯಿಂದ ರೈಲು ಸಂಚಾರ ಅಥವಾ ಪ್ರಯಾಣಿಕರ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಎರಡೂ ವಿಭಾಗಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ.

Scroll to Top