ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ವಿಧಿವಶ: ನೂರಾರು ಘಟನೆಗಳನ್ನು ವರದಿ ಮಾಡಿ ಪತ್ರಿಕಾರಂಗಕ್ಕೆ ಸಲ್ಲಿಸಿದ ಸೇವೆ ಅಪಾರ



(ನ್ಯೂಸ್‌ ಕಡಬ) newskadaba.com,  ಮೇ.07:  ಹಿರಿಯ ಪತ್ರಕರ್ತರಾದ ಪ್ರಹ್ಲಾದ್ ಕುಳಲಿ (87) ಅವರು ಇಂದು (ಮೇ 7) ಬೆಳಗ್ಗೆ 8.45ಕ್ಕೆ ಕೆಂಗೇರಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ…







ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ಹಾಗೂ ದಿ. ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅಪಾರ ಅನುಭವ ಹೊಂದಿದ್ದರು. ಪ್ರಹ್ಲಾದ್ ಕುಳಲಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ ಒಂದೂವರೆ ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.






ಪತ್ರಕರ್ತರಾಗಿದ್ದ ಆರಂಭಿಕ ದಿನಗಳು

ಮೂಲತಃ ಬೆಳಗಾವಿ ಜಿಲ್ಲೆಯ ಹೊಸಕೋಟ ಗ್ರಾಮದವರಾದ ಪ್ರಹ್ಲಾದ್ ಅವರು, ಮುಧೋಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಲೇಖನಗಳನ್ನು ಬರೆಯಲು ಆರಂಭಿಸಿದ್ದರು. ಆಗಲೇ ಹುಬ್ಬಳ್ಳಿ, ಬೆಂಗಳೂರಿನ ವಾರ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗುತ್ತಿದ್ದವು. ನಂತರ ಪತ್ರಿಕೋದ್ಯಮವನ್ನು ವ ಹುಬ್ಬಳ್ಳಿ ಸಂಯುಕ್ತ ಕರ್ನಾಟಕದಲ್ಲಿ 1956 ರಿಂದ 57 ರವರೆಗೆ, ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ 1997 ರವರೆಗೆ ಸುಮಾರ 40 ವರ್ಷಗಳ ಸತತ ಸೇವೆ ಸಲ್ಲಿಸಿದ ನಂತರ ಸೇವಾ ನಿವೃತ್ತಿ ಹೊಂದಿದರು.

ಬೆಂಗಳೂರು ಆಕಾಶವಾಣಿ- ದೂರದರ್ಶನದಲ್ಲಿಯೂ ಕೆಲಸ

ಆದರೂ ಬರವಣಿಗೆ ನಿಲ್ಲಲಿಲ್ಲ. ಉತ್ತರಾಧಿಮಠದ ಶ್ರೀ ಸುಧಾ ಆಧ್ಯಾತ್ಮಿಕ ಮಾಸಿಕದಲ್ಲಿ 3 ವರ್ಷ ಸೇವೆ, ಕೆಎನ್‌ಎನ್‌, ಒರಿಯಂಟಲ್ ನ್ಯೂಸ್, ಕನ್ನಡ ಭಾರತಿ, ಕನ್ನಡ ವಾರ್ತಾ ಸಂಸ್ಥೆಗಳಲ್ಲಿ ಸುದ್ದಿ ಸಂಪಾದಕನಾಗಿ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಬೆಂಗಳೂರು ಆಕಾಶವಾಣಿ, ಬೆಂಗಳೂರು ದೂರದರ್ಶನ ಕೇಂದ್ರಗಳಲ್ಲಿ ಕ್ಯಾಷುವಲ್ ಎಡಿಟರ್ ಆಗಿ 13 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದರು.

ವಿಶೇಷ ಜನಮನ್ನಣೆಗಳಿಸಿದ ವರದಿಗಳು

ಮುಖ್ಯ ವರದಿಗಾರರಾಗಿ ಪ್ರತೀ ವಾರ ಬರೆಯುತ್ತಿದ್ದ ಹಿನ್ನೆಲೆ -ಮುನ್ನೆಲೆ ಅಂಕಣಗಳು, 1986 ರಲ್ಲಿ ಬೆಂಗಳೂರಲ್ಲಿ ನಡೆದ ಸಾರ್ಕ್ ಶೃಂಗಸಭೆಯ ಕಲಾಪಗಳ ವರದಿ, 1993 ರಲ್ಲಿ ಮಹಾರಾಷ್ಟ್ರದ ಕಿಲಾರಿಯಲ್ಲಿ ಸಂಭವಿಸಿದ 10 ಸಾವಿರಕ್ಕೂ ಜನರನ್ನು ಬಲಿಪಡೆದ ಭೂಕಂಪದ ವರದಿ, ಹೈದರಾಬಾದ್ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಸ್ಥಿತಿಗತಿ ಸುಧಾರಣೆಗೆ ವಿಶೇಷ ತನಿಖಾ ವರದಿಗಳು.

ಪ್ರಶಸ್ತಿಗಳು

ಪ್ರಹ್ಲಾದ್ ಕುಳಲಿ ಅವರಿಗೆ ಅಪಾರ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. 2 ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಬೆಂಗಳೂರು ವರದಿಗಾರರ ಕೂಟದ ವಾರ್ಷಿಕ ಪ್ರಶಸ್ತಿಯೂ ಎರಡು ಬಾರಿ ಲಭಿಸಿದೆ. ಇಷ್ಟೇ ಅಲ್ಲದೆ ಸನ್ಮಾನಗಳು ಅವರಿಗೆ ಸಂದಿವೆ.

error: Content is protected !!
Scroll to Top