(ನ್ಯೂಸ್ ಕಡಬ) newskadaba.com ಫೆ.19 : 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ನೆದರ್‌ಲೆಂಡ್ಸ್ ಎದುರು ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 4 ಗೆಲುವು ದಾಖಲಿಸುವ ಮೂಲಕ ಅಜೇಯವಾಗಿ ಸೂಪರ್-8 ಹಂತವನ್ನು ಪ್ರವೇಶಿಸಿದೆ. ಇನ್ನು ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಈ ಪಂದ್ಯದಲ್ಲಿ 21 ಎಸೆತಗಳಲ್ಲಿ 30 ರನ್ ಗಳಿಸಿದ ಅವರು, ಟಿ20 ಕ್ರಿಕೆಟ್‌ನಲ್ಲಿ 6,000 ರನ್ ಮತ್ತು 200 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರನಾಗಿ ದಾಖಲೆ ಬರೆದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಬಾರಿಸಿದ್ದರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟಾದರೂ, ಅಷ್ಟರಲ್ಲಾಗಲೇ ಅವರ ಹೆಸರು ದಾಖಲೆ ಪುಸ್ತಕ ಸೇರಿತ್ತು…..
ನೆದರ್‌ಲೆಂಡ್ಸ್ ಎದುರು ಭಾರತಕ್ಕೆ ಭರ್ಜರಿ ಜಯ
ಈ ಗೆಲುವಿನೊಂದಿಗೆ ಭಾರತವು ಗ್ರೂಪ್-ಎ ನಲ್ಲಿ ಸತತ ನಾಲ್ಕು ಗೆಲುವುಗಳನ್ನು ದಾಖಲಿಸಿ ಅಜೇಯವಾಗಿ ಉಳಿದಿದೆ. 194 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 176/7 ರನ್‌ಗಳಿಗೆ ಸೀಮಿತವಾಗಿ, 17 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಈಗಾಗಲೇ ಸೂಪರ್-8 ಹಂತವನ್ನು ತಲುಪಿದೆ.
ಗ್ರೂಪ್-1ರಲ್ಲಿ ಭಾರತವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳನ್ನು ಎದುರಿಸಲಿದೆ. ಫೆಬ್ರವರಿ 22 ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಸೂಪರ್-8 ಪಂದ್ಯವನ್ನು ಆಡಲಿದೆ.






