ದೆಹಲಿ ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: 4 ಮಂದಿ ಮೃತ್ಯು

(ನ್ಯೂಸ್‌ ಕಡಬ) newskadaba.com, ಅ .31. ರಾಷ್ಟ್ರ ರಾಜಧಾನಿ ದೆಹಲಿಯ ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶದ ಶೂ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಫೇಸ್-1ರಲ್ಲಿರುವ ಈ ಕಾರ್ಖಾನೆಯ ನೆಲಮಾಳಿಗೆಯಲ್ಲಿ ರಾತ್ರಿ 9.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ರಾತ್ರಿ 9.32ಕ್ಕೆ ಮಾಹಿತಿ ಪಡೆದ ಅಗ್ನಿಶಾಮಕ ದಳವು ತಕ್ಷಣ 20 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.

ಕಟ್ಟಡದ ಒಳಗೆ ಸಿಲುಕಿದ್ದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರು ಮಂದಿಯನ್ನು ರಕ್ಷಿಸಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರದೃಷ್ಟವಶಾತ್ ನಾಲ್ವರು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಉಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕರಿಗೆ ಪೊಲೀಸರು ಸಮನ್ಸ್ ನೀಡಿದ್ದು, ಅಗ್ನಿ ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಕಾರ್ಮಿಕರ ಸುರಕ್ಷತೆಯ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to Top