
(ನ್ಯೂಸ್ ಕಡಬ) newskadaba.com, ಅ .31. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ವಸಂತಿ (26) ಎಂಬ ಯುವತಿ ಕೆಲಸಕ್ಕೆಂದು ಮಂಗಳೂರಿಗೆ ತೆರಳಿದವರು ವಾಪಸ್ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ 2 ವರ್ಷಗಳಿಂದ ಮಂಗಳೂರಿನ KFDC ಫಿಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಸಂತಿ, ಕಂಪನಿಯ ರೂಮ್ನಲ್ಲಿ ವಾಸವಿದ್ದರು. ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಅವರು ಅಕ್ಟೋಬರ್ 10ರಂದು ರಜೆ ನಿಮಿತ್ತ ಮನೆಗೆ ಬಂದಿದ್ದರು. ಬಳಿಕ ಅಕ್ಟೋಬರ್ 13ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದರು.
ಅಕ್ಟೋಬರ್ 27ರಂದು ಮನೆಯವರು ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ, ಮಂಗಳೂರಿನ ಕಂಪನಿಗೆ ತೆರಳಿ ವಿಚಾರಿಸಿದಾಗ ಅ. 10ರಂದು ರಜೆಗೆ ತೆರಳಿದವರು ಮತ್ತೆ ಕೆಲಸಕ್ಕೆ ಬಂದಿಲ್ಲ ಎಂಬುದು ತಿಳಿದುಬಂದಿದೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾಗಿರುವ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭಿಸಿದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.




