(ನ್ಯೂಸ್ ಕಡಬ) newskadaba.com, ಡಿ.04 : ದೇಶಾದ್ಯಂತ ವಿವಿಧ ಕಾರಣಗಳಿಂದಾಗಿ ಮಂಗಳವಾರ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಸಂಚಾರ ರದ್ದುಗೊಂಡಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸೇರಿದ್ದು, ದೀರ್ಘ ವಿಳಂಬ ಮತ್ತು ಸಂವಹನ ಕೊರತೆಯ ಬಗ್ಗೆ ವಿಮಾನಯಾನ ಸಂಸ್ಥೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂಡಿಗೋ ಕಾರ್ಯಾಚರಣೆಯ ವಿಳಂಬದಿಂದಾಗಿ ಅನೇಕರು 14 ಗಂಟೆಗಳಿಗಿಂತಲೂ ಹೆಚ್ಚು ಕಾಲ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು.
ವಿವಿಧ ರೀತಿಯ ಸಮಸ್ಯೆಗಳ ಕಾರಣದಿಂದ ದೇಶಾದ್ಯಂತ ಮಂಗಳವಾರ 200ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಮಾನಯಾನ ಸಂಸ್ಥೆಯು ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸೋಮವಾರ ಹೊಸ ನಿಯಮಗಳನ್ನು ಜಾರಿಗೆಗೊಳಿಸಿದ್ದು, ಇದರ ಬಳಿಕ ಸಿಬ್ಬಂದಿ ಕೊರತೆಯನ್ನು ಎದುರಿಸಿದೆ. ಇದು ವಿಮಾನ ಹಾರಾಟಕ್ಕೆ ತೊಂದರೆಯನ್ನು ಉಂಟು ಮಾಡಿತು.
ವಿಮಾನ ಹಾರಾಟವಿಲ್ಲದೆ ಅನೇಕ ಪ್ರಯಾಣಿಕರು ನಿಲ್ದಾಣಗಳಲ್ಲಿ 12 ರಿಂದ 14 ಗಂಟೆಗಳ ಕಾಲ ಸಿಲುಕಿಕೊಂಡರು. ವಿಮಾನ ಸಂಚಾರದ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ನಿಲ್ದಾಣಗಳಲ್ಲಿ ದೀರ್ಘವಾದ ಸರತಿ ಸಾಲುಗಳು ಕಂಡುಬಂದವು. ಇದರಿಂದ ತೊಂದರೆಗೆ ಒಳಗಾದ ಅನೇಕ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡರು. ಪ್ರಯಾಣಿಕರೊಂದಿಗೆ ಇಂಡಿಗೋದ ಗ್ರಾಹಕ ಸೇವಾ ಪ್ರತಿಕ್ರಿಯೆ ತಂಡವು ಸರಿಯಾಗಿ ಸ್ಪಂದಿಸಿಲ್ಲ ಎಂದು ಅನೇಕರು ದೂರಿದ್ದಾರೆ.










