(ನ್ಯೂಸ್ ಕಡಬ) newskadaba.com, ನ.07 ನವದೆಹಲಿ: ‘ವಂದೇ ಮಾತರಂ ಈ ಹಾಡನ್ನು ಕೇಳಿದಾಗ ಭಾರತೀಯರಾದ ನಮ್ಮ ಮೈ ರೋಮಾಚಂನಗೊಳ್ಳುತ್ತದೆ, ಮನ ಪುಳಕಿತಗೊಳ್ಳುತ್ತದೆ. ಸಂತ ಬಂಕಿಮಚಂದ್ರ ಚಟರ್ಜಿ ಅವರ ಕೃತು ಶಕ್ತಿಯಿಂದ ಮೂಡಿಬಂದಿರುವ ಗೀತೆ ಶತಮಾನಗಳಿಂದ ಇಂದಿನವರೆಗೂ ನಮ್ಮಲ್ಲಿ ನವ ಚೈತನ್ಯವನ್ನು ಮತ್ತು ದೇಶ ಪ್ರೇಮದ ಭಾವವನ್ನು ಉದ್ದೀಪನಗೊಳಿಸುತ್ತಿದೆಯೆಂದರೆ ಈ ಹಾಡಿಗಿರುವ ಶಕ್ತಿಗೆ ಸಾಕ್ಷಿಯಾಗಿದೆ.
ಈ ದೇಶ ಪ್ರೇಮವನ್ನು ಉದ್ದೀಪನಗೊಳಿಸುವ ಈ ಗೀತೆಗೆ ಇದೇ ನ.07ಕ್ಕೆ 150 ವರ್ಷ ತುಂಬುತ್ತಿದೆ. ಚಟರ್ಜಿ ಅವರು ಈ ಹಾಡನ್ನು ಬರೆದಿರುವ ದಿನಾಂಕದ ಕುರಿತಾಗಿ ಗೊಂದಲಗಳಿದ್ದರೂ ಇದೀಗ ಈ ಹಾಡಿನ ಕಾಲ ನಿರ್ಣಯ ಖಚಿತಗೊಂಡಿದ್ದು, 1875ನೇ ಇಸವಿ ನ.07ರಂದು ಈ ಹಾಡು ಬರೆಯಲ್ಪಟ್ಟಿದೆ ಎಂಬ ನಿರ್ಣಯಕ್ಕೆ ಬರಲಾಗಿದೆ. ಬಂಕಿಮಚಂದ್ರ ಚಟರ್ಜಿ ಅವರ ಮಹೋನ್ನತ ಕೃತಿಯಾಗಿರುವ ಆನಂದ ಮಠಕ್ಕಿಂತ ಬಹಳ ಮೊದಲೇ ಈ ಹಾಡು ಚಟರ್ಜಿ ಅವರ ಲೇಖನಿಯಿಂದ ಮೂಡಿ ಬಂದಿರುವುದು ವಿಶೇಷ.
‘ವಂದೇ ಮಾತರಂ’ ಎಂಬುದು ಕೇವಲ ಒಂದು ದೇಶಭಕ್ತಿ ಗೀತೆಯಲ್ಲ, ಬದಲಿಗೆ ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಒಂದು ಶಕ್ತಿ ಗೀತೆಯಾಗಿ ಪ್ರಚಲಿತಗೊಂಡಿತ್ತು. ಭಾರತ ಮಾತೆಯ ಸಮೃದ್ಧತೆಯನ್ನು ಮತ್ತು ಇಲ್ಲಿನ ವೈವಿಧ್ಯತೆಯನ್ನು ಸಮರ್ಥವಾಗಿ ಶತಮಾನಗಳ ಕಾಲ ಬಿಂಬಿಸುವ ಸಾಮರ್ಥ್ಯವನ್ನು ಈ ಗೀತೆ ಅಂದಿನಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿರುವುದು ವಿಶೇಷವೇ ಸರಿ.










