(ನ್ಯೂಸ್ ಕಡಬ) newskadaba.com, ನ.03 ಹೈದರಾಬಾದ್: ಬಸ್ ಮೇಲೆ ಜಲ್ಲಿ ತುಂಬಿದ್ದ ಟಿಪ್ಪರ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಟ ೨೦ ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ತಾಲೂಕಿನ ಮಿರಾಜಗುಡಾ ಬಳಿ ಆರ್ಟಿಸಿ ಬಸ್ ಮೇಲೆ ಟಿಪ್ಪರ್ನಲ್ಲಿದ್ದ ಜಲ್ಲಿಕಲ್ಲು ಬಿದ್ದ ಪರಿಣಾಮ ೨೦ ಮಂದಿ ಪ್ರಯಾಣಿಕರು ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರು ಜಲ್ಲಿಕಲ್ಲಿನ ಅಡಿ ಸಿಲುಕಿದ್ದ ಪರಿಣಾಮ ಸ್ಥಳದಲ್ಲೇ ೨೦ ಮಂದಿ ಅಸುನೀಗಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಅಪಘಾತದ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜೆಸಿಬಿಯಿಂದ ಜಲ್ಲಿಕಲ್ಲಿನಡಿ ಸಿಲುಕಿದವರನ್ನು ರಕ್ಷಿಸಿದರು.ಅಪಘಾತಕ್ಕೀಡಾದ ಬಸ್ ತಾಂಡೂರ್ನಿಂದ ಹೈದರಾಬಾದ್ ಕಡೆ ತೆರಳುತಿತ್ತು. ಇದರಲ್ಲಿ ೭೦ ಮಂದಿ ಪ್ರಯಾಣಿಕರಿದ್ದು, ಬಹುತೇಕರು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು. ವಿದ್ಯಾರ್ಥಿಗಳೆಲ್ಲರೂ ಹೈದರಾಬಾದ್ನ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದವರಾಗಿದ್ದಾರೆ.
ಅಪಘಾತದಲ್ಲಿ ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.ಟಿಪ್ಪರ್ ಚಾಲಕನ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ.ಈ ರಸ್ತೆ ಅಪಘಾತದಿಂದಾಗಿ ಹೈದರಾಬಾದ್-ಬಿಜಾಪುರ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಚೆವೆಲ್ಲಾ-ವಿಕಾರಾಬಾದ್ ಮಾರ್ಗದಲ್ಲಿ ಹೆಚ್ಚಿನ ವಾಹನಗಳನ್ನು ನಿಲ್ಲಿಸಲಾಗಿತ್ತು.










