(ನ್ಯೂಸ್ ಕಡಬ) newskadaba.com ಸೆ. 09. ಯೂಟ್ಯೂಬ್, ಫೇಸ್ಬುಕ್, ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ಹೇರಿದ್ದ ನಿಷೇಧವನ್ನು ವಿರೋಧಿಸಿ ನೇಪಾಳದ ಜನರು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರಕಾರ ನಿಷೇಧವನ್ನು ಹಿಂದಕ್ಕೆ ಪಡೆದಿದೆ.
ಸಚಿವ ಸಂಪುಟದ ತುರ್ತು ಸಭೆ ಕರೆದು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ. ಇನ್ನು ಮುಂದೆ ಎಂದಿನಂತೆ ಸೋಷಿಯಲ್ ಮೀಡಿಯಾ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಮಾಹಿತಿ ನೀಡಿದ್ದಾರೆ.
ನೇಪಾಳ ಸರ್ಕಾರವು ಯೂಟ್ಯೂಬ್, ಫೇಸ್ಬುಕ್, ಎಕ್ಸ್ ಸೇರಿದಂತೆ 26 ಸಾಮಾಜಿಕ ತಾಣಗಳ ಮೇಲೆ ನಿರ್ಬಂಧ ಹೇರಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ಧ ನೇಪಾಳದ ಜನರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರತಿಭಟನಾಕಾರರ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ನೇಪಾಳ ಸರ್ಕಾರ ಸಾಮಾಜಿಕ ತಾಣಗಳ ಮೇಲಿನ ನಿಷೇಧವನ್ನು ಹಿಂಪಡೆದಿದೆ.










