(ನ್ಯೂಸ್ ಕಡಬ) newskadaba.com, ಆ.07: ನವದೆಹಲಿ: ಇತ್ತೀಚೆಗಷ್ಟೇ ನರೇಂದ್ರ ಮೋದಿ ಅತೀ ಸುದೀರ್ಘವಾಗಿ ಪ್ರಧಾನಿಯಾಗಿ ಮುಂದುವರಿಯುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ರೆಕಾರ್ಡ್‌ಯನ್ನು ಮುರಿದಿದ್ದರು. ಇದೀಗ ಇದರ ಬೆನ್ನಲ್ಲೇ ಗೃಹಸಚಿವ ಅಮಿತ್ ಶಾ ಕೂಡ ಅತೀ ಹೆಚ್ಚು ವರ್ಷಗಳ ಕಾಲ ಗೃಹಸಚಿವರಾಗಿ ಮುಂದುವರಿಯುವ ಮೂಲಕ ದಾಖಲೆ ಬರೆದಿದ್ದಾರೆ. ಕೇಂದ್ರ ಗೃಹ ಸಚಿವರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅಮಿತ್ ಶಾ ಅವರು 2,258 ದಿನಗಳನ್ನು ಪೂರೈಸಿದ್ದಾರೆ. ಆ ಮೂಲಕ ಅವರು ಗೃಹ ಸಚಿವ ಹುದ್ದೆಯಲ್ಲಿ 2,256 ದಿನಗಳನ್ನು ಪೂರೈಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಹಿಂದಿಕ್ಕಿದ್ದಾರೆ.
ಆರು ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿರುವ ಅಮಿತ್ ಶಾ ಅವರು 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಹಿಡಿದು ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಪರಿಷ್ಕರಿಸುವವರೆಗೆ, ಶಾ ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ನಂತರ ಅಮಿತ್ ಶಾ ಅವರನ್ನೇ ಅತ್ಯಂತ ಪ್ರಭಾವಶಾಲಿ ರಾಜಕೀಯ ವ್ಯಕ್ತಿ ಕರೆಯಲಾಗುತ್ತದೆ. ಇನ್ನು ಮಂಗಳವಾರ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ, ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗೃಹ ಸಚಿವರಾದ ಶಾ ಅವರನ್ನು ಅಭಿನಂದಿಸಿದ್ದಾರೆ.










