(ನ್ಯೂಸ್ ಕಡಬ) newskadaba.com, ಸೆ. 07. ಅಕ್ರಮ ಮರಳುಗಾರಿಕೆ ತಡೆಯುವ ದೃಷ್ಟಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದ.ಕ. ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಕೆಲವೊಂದು ಕಡೆಗಳ ಕ್ಯಾಮರಾಗಳೇ ಮಾಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಎಲ್ಲ ಕ್ಯಾಮರಾಗಳ ಪ್ರಸ್ತುತ ಸ್ಥಿತಿಯನ್ನು ಅರಿಯುವ ದೃಷ್ಟಿಯಿಂದ ಇಲಾಖೆ ಪರಿಶೀಲನೆ ನಡೆಸಲು ಆರಂಭಿಸಿದೆ.
ಮರಳು ಅಕ್ರಮ ಸಾಗಣೆ ಕುರಿತು ಅತೀ ಹೆಚ್ಚಿನ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಿಗದಿತ ಜಾಗಗಳನ್ನು ಗುರುತಿಸಿ ಇಲಾಖೆ ಸೋಲಾರ್ ವಿದ್ಯುತ್ ಆಧಾರಿತ ಕ್ಯಾಮರಾಗಳನ್ನು ಅಳವಡಿಸಿತ್ತು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ 4 ಕಡೆ ಹಾಗೂ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 26 ಕಡೆ ಕ್ಯಾಮರಾಗಳ ಅಳವಡಿಕೆಯಾಗಿತ್ತು.
ನಿರ್ದಿಷ್ಟ ಆಯಕಟ್ಟಿನ ಜಾಗಗಳಲ್ಲಿ ಒಂದು ಕಂಬವನ್ನು ಅಳವಡಿಸಿ ಕಬ್ಬಿಣದ ಪೆಟ್ಟಿಗೆಯನ್ನು ಅಳವಡಿಸಿ ಅದರೊಳಗೆ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಆದರೆ ಕೆಲವೊಂದು ಕಡೆಗಳಲ್ಲಿ ಕಂಬಗಳು ಮಾತ್ರ ಇದ್ದು, ಅದರಲ್ಲಿದ್ದ ಕ್ಯಾಮರಾ ಮಾಯವಾಗಿದೆ. ಅವುಗಳಿಗೆ ಹಾನಿ ಮಾಡಿದವರು ಯಾರು ಎಂಬ ನಿಟ್ಟಿನಲ್ಲಿ ಇಲಾಖೆ ತನಿಖೆ ಮಾಡಬೇಕಿದೆ. ಈ ರೀತಿ ಕ್ಯಾಮರಾಗಳನ್ನು ತೆಗೆಯುವಲ್ಲಿ ಮರಳು ಮಾಫಿಯಾ ಕೆಲಸ ಮಾಡಿದೆಯೇ ಅಥವಾ ಕಿಡಿಗೇಡಿಗಳು ಹಾನಿ ಮಾಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪರಿಶೀಲನೆ ನಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.





