(ನ್ಯೂಸ್ ಕಡಬ) newskadaba.com ಜೂ. 30. ಭಾರತೀಯ ರೈಲ್ವೆ ಇಲಾಖೆಯು ಕೆಲ ವರ್ಷಗಳ ನಂತರ ನೂತನ ಪ್ರಯಾಣ ದರದಲ್ಲಿ ತುಸು ಹೆಚ್ಚಳ ಮಾಡಿದ್ದು, ನಾಳೆಯಿಂದ (ಜುಲೈ 1) ದೇಶದಾದ್ಯಂತ ಜಾರಿಗೆ ಬರಲಿದೆ. ಮೇಲ್/ಎಕ್ಸ್ ಪ್ರೆಸ್ ರೈಲುಗಳ ದರವು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಾಗಲಿದೆ. ಎಸಿ ಕ್ಲಾಸ್‌ಗೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವಾಗಲಿದೆ.
ಈ ಏರಿಕೆಯು ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ. ಅದರಲ್ಲೂ ದಿನನಿತ್ಯ ರೈಲಿನಲ್ಲಿ ಪ್ರಯಾಣಿಸುವವರಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ. ಇನ್ನು ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವರದಿಯ ಪ್ರಕಾರ, ಕರ್ನಾಟಕದ ಹಲವು ರೈಲು ಮಾರ್ಗಗಳ ಟಿಕೆಟ್ ದರವೂ ಪರಿಷ್ಕರಣೆಯಾಗಲಿದೆ. ಆದರೆ, ಸಬರ್ಬನ್ ಟಿಕೆಟ್ ಗಳು ಮತ್ತು 500 ಕಿ.ಮೀ. ವರೆಗಿನ ಎರಡನೇ ದರ್ಜೆಯ ಪ್ರಯಾಣಕ್ಕೆ ಯಾವುದೇ ದರ ಏರಿಕೆ ಇರುವುದಿಲ್ಲ. ಮಾಸಿಕ ಪಾಸ್ ಟಿಕೆಟ್ ಗಳ ದರದಲ್ಲಿ ಯಾವುದೇ ಬದಲಾವಣೆಯಿಲ್ಲ. 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ಪ್ರಯಾಣಿಸಿದರೆ, ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಳವಾಗಲಿದೆ. ಇದಲ್ಲದೆ, ರೈಲ್ವೇ ಇಲಾಖೆಯು ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಉದ್ದೇಶದಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದೆ. ಇದು ನಾಳೆಯಿಂದ ಜಾರಿಗೆ ಬರಲಿದೆ.
ಕರ್ನಾಟದಲ್ಲಿ ದರ ಹೆಚ್ಚಳದ ಪಟ್ಟಿ:
ಬೆಂಗಳೂರು ಕಲಬುರಗಿ (2 ಕ್ಲಾಸ್ ) – 5.5 ರೂ., ಬೆಂಗಳೂರು ವಿಜಯಪುರ (2 ಕ್ಲಾಸ್ ) – 7.1 ರೂ., ಬೆಂಗಳೂರು ಮೈಸೂರು (ಎಸಿ ಕೋಚ್) – 2.8 ರೂ., ಬೆಂಗಳೂರು ಹುಬ್ಬಳ್ಳಿ (ಎಸಿ ಕೋಚ್) – 9.4 ರೂ., ಬೆಂಗಳೂರು ಮಂಗಳೂರು (ಎಸಿ ಕೋಚ್) – 8.2 ರೂ., ಬೆಂಗಳೂರು ಕಲಬುರಗಿ (ಎಸಿ ಕೋಚ್) – 11 ರೂ., ಬೆಂಗಳೂರು ವಿಜಯಪುರ (ಎಸಿ ಕೋಚ್) – 14.2 ರೂ.










