(ನ್ಯೂಸ್ ಕಡಬ) newskadaba.com ಜೂ. 26. ಮಗನೋರ್ವ ಮನೆಯಲ್ಲಿ ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಬಳಿಕ ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ಮಂಜೇಶ್ವರದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ತಾಯಿ ಮೃತಪಟ್ಟಿದ್ದು, ನೆರೆಮನೆಯ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಮಹಿಳೆಯನ್ನು ವರ್ಕಾಂಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋ ಅವರ ಪತ್ನಿ ಹಿಲ್ಡಾ (60) ಎಮದು ಗುರುತಿಸಲಾಗಿದೆ. ನೆರೆಮನೆಯ ವಿಕ್ಟರ್ ಅವರ ಪತ್ನಿ ಲೊಲಿಟಾ (30) ಗಂಭೀರವಾಗಿ ಗಾಯಗೊಂಡ ಮಹಿಳೆ. ಆರೋಪಿ ಮೃತ ಮಹಿಳೆಯ ಪುತ್ರ ಮೆಲ್ವಿನ್ ಮೊಂತೇರೋ ಕೃತ್ಯವೆಸಗಿದ್ದು, ಪರಾರಿಯಾಗಿದ್ದಾನೆ ಎನ್ನಲಾಗಿದೆ.
ತಾಯಿಗೆ ಬೆಂಕಿ ಹಚ್ಚಿದ ನಂತರ ಆರೋಪಿಯು ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಹೇಳಿ ಮನೆಗೆ ಕರೆದು ಬಳಿಕ ಆಕೆಗೂ ಬೆಂಕಿ ಹಚ್ಚಿದ್ದಾನೆ. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸವಾಗಿದ್ದು, ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದಾನೆ. ಆರೋಪಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಕೃತ್ಯಕ್ಕೆ ನೀಕರ ಕಾರಣ ತಿಳಿದು ಬಂದಿಲ್ಲ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.









