(ನ್ಯೂಸ್ ಕಡಬ) newskadaba.com, ಫೆ.10. ನವದೆಹಲಿ: ದೇಶದಲ್ಲಿ ಸುಮಾರು 14 ಕೋಟಿ ಜನ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಜನಗಣತಿಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಫಲಾನುಭವಿಗಳನ್ನು 2011 ರ ಜನಗಣತಿಯ ಪ್ರಕಾರ ಗುರುತಿಸಲಾಗುತ್ತಿದೆ. ಇತ್ತೀಚಿನ ಜನಸಂಖ್ಯಾ ಸಂಖ್ಯೆಗಳ ಪ್ರಕಾರ ಅಲ್ಲ ಎಂದು ಹೇಳಿದರು.
ಯುಪಿಎ ಸರ್ಕಾರ ಸೆಪ್ಟೆಂಬರ್ 2013 ರಲ್ಲಿ ಜಾರಿಗೆ ತಂದ ಎನ್‌ಎಫ್‌ಎಸ್‌ಎ ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಠಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ತಿಳಿಸಿದರು.