(ನ್ಯೂಸ್ ಕಡಬ) newskadaba.com,ಮೇ.15: ಪಾಕಿಸ್ತಾನ ದೇಶದ ವಾಯವ್ಯ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾನಲ್ಲಿ ಉಗ್ರರು ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ 18 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ನಿಷೇಧಿತ ಉಗ್ರ ಸಂಘಟನೆ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಈ ದಾಳಿಯ ಹೊಣೆ ಹೊತ್ತಿದೆ ಎಂದು ತಿಳಿದುಬಂದಿದೆ.
ಬಜೌರ್ ಜಿಲ್ಲೆಯ ದಮಂಗಿ ಸ್ಕೌಟ್ಸ್ ಕ್ಯಾಂಪ್ ಮೇಲೆ ಉಗ್ರರು ಆತ್ಮಹತ್ಯಾ ದಾಳಿಯೊಂದಿಗೆ ದಾಳಿ ಆರಂಭಿಸಿದ್ದಾರೆ. ಶಿಬಿರದ ಮುಖ್ಯ ದ್ವಾರದ ಬಳಿ ಉಗ್ರನೊಬ್ಬ ಸ್ಫೋಟ ನಡೆಸಿದ ಬಳಿಕ, ಸುಮಾರು 20ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಭಯೋತ್ಪಾದಕರು ಸೇನಾ ಶಿಬಿರದೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ.
ಭೀಕರ ಗುಂಡಿನ ಕಾಳಗದಲ್ಲಿ ಕನಿಷ್ಠ 14 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಐನಾಯಿ ಕಿಲೆ ಮತ್ತು ಮಾಮಂಡ್ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ. ದಾಳಿಯ ಬಳಿಕ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಕನಿಷ್ಠ ಒಂಬತ್ತು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳವನ್ನು ಸೇನೆ ಸುತ್ತುವರೆದು, ಅಡಗಿಕೊಂಡಿರುವ ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿದ್ದು, ಜನರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಕಳೆದ ಮಂಗಳವಾರವೂ ಖೈಬರ್ ಪಖ್ತುಂಖ್ವಾದ ನೌರಂಗ್ ಬಜಾರ್ ಪ್ರದೇಶದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದರು.
ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಉಗ್ರ ದಾಳಿಗಳು ಅಲ್ಲಿನ ಭದ್ರತಾ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತೊಮ್ಮೆ ಎಬ್ಬಿಸಿವೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.







