(ನ್ಯೂಸ್ ಕಡಬ) newskadaba.com ಜ.23 ನವದೆಹಲಿ: ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್ಎಂ) ಅನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲು ಬುಧವಾರ ಅನುಮೋದನೆ ನೀಡಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪೀಯೂಷ್ ಗೋಯೆಲ್, ‘ಈ ಯೋಜನೆ ಕಳೆದ 10 ವರ್ಷಗಳಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. 2021-22ರ ಅವಧಿಯಲ್ಲಿ ಸುಮಾರು 12 ಲಕ್ಷ ಆರೋಗ್ಯ ಕಾರ್ಯಕರ್ತರು ಮಿಷನ್‌ನೊಂದಿಗೆ ಜೋಡಿಸಿದ್ದು, ಇಡೀ ದೇಶ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಾಯಿತು’ ಎಂದರು.
ಕೋವಿಡ್ ಸಮಯದಲ್ಲಿ ಎನ್‌ಎಚ್ಎಂ ಬಹುಮುಖ್ಯ ಪಾತ್ರ ವಹಿಸಿದ್ದು, 2021ರ ಜನವರಿಯಿಂದ 2024ರ ಮಾರ್ಚ್‌ವರೆಗೆ 200 ಕೋಟಿಗಿಂತಲೂ ಅಧಿಕ ವ್ಯಾಕ್ಸಿನ್ ಡೋಸ್ ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಕಲ್ಪಿಸುವ ಉದ್ದೇಶದಿಂದ 2005ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್ಆರ್‌ಎಚ್ಎಂ) ಎಂಬ ಹೆಸರಿನಲ್ಲಿ ಯೋಜನೆ ಆರಂಭವಾಯಿತು. 2012ರಲ್ಲಿ, ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (ಎನ್‌ಯುಎಚ್ಎಂ) ಪರಿಚಯಿಸುವ ಮೂಲಕ ನಗರ ಪ್ರದೇಶಕ್ಕೆ ಯೋಜನೆಯ ವ್ಯಾಪ್ತಿ ವಿಸ್ತರಿಸಿತು. ಮುಂದೆ ಎನ್ಆರ್‌ಎಚ್ಎಂ ಅನ್ನು ಎನ್‌ಎಚ್ಎಂ ಎಂದು ಬದಲಾಯಿಸಿ, ಅದರಡಿಯಲ್ಲಿಯೇ ಎನ್ಆರ್‌ಎಚ್ಎಂ ಮತ್ತು ಎನ್‌ಯುಎಚ್ಎಂ ಎರಡೂ ಉಪಯೋಜನೆಗಳನ್ನು ಅಳವಡಿಸಲಾಯಿತು.