ಜಿಎಸ್‌ಟಿ ಗೆ ಪ್ರಧಾನಿ ಮೋದಿಯಿಂದ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜು.01. ಸ್ವಾತಂತ್ರದ ನಂತರ ಭಾರತದ ‘ಅತಿ ದೊಡ್ಡ ತೆರಿಗೆ ಸುಧಾರಣೆ’ ಎಂದು ಬಣ್ಣಿಸಲಾದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಹೊಸದಿಲ್ಲಿಯ ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಭವನದಲ್ಲಿ ರಾತ್ರಿ 11:00 ಗಂಟೆಗೆ ಆರಂಭ ಗೊಂಡ ವಿಶೇಷ ಅಧಿವೇಶನದಲ್ಲಿ ಮಧ್ಯರಾತ್ರಿಯ ಬಳಿಕ ರಾಷ್ಟ್ರ ಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೆಲ್ ಹೊಡೆಯುವ ಮೂಲಕ ಜಿಎಸ್‌ಟಿಗೆ ಅಧಿಕೃತ ಚಾಲನೆ ನೀಡಿದರು.

 

ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ವಿತ್ತ ಸಚಿವ ಅರುಣ್ ಜೇಟ್ಲಿ, ಮಾಜಿ ಪ್ರಧಾನಿ ದೇವೇಗೌಡ, ಎನ್‌ಸಿಪಿ ನಾಯಕ ಶರದ್ ಪವಾರ್,ಲೋಕಸಭಾ ಸಂಸದರು ಹಾಗೂ 100ಕ್ಕೂ ಅಧಿಕ ವಿಶೇಷ ಆಹ್ವಾನಿತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಉದ್ಯಮ ದಿಗ್ಗಜ ರತನ್ ಟಾಟಾ, ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Also Read  ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಧಿವೇಶನದಲ್ಲಿ ಪ್ರಮುಖ ಭಾಷಣ ಮಾಡಿದರು. ‘ಒಂದೇ ದೇಶ ಒಂದೇ ತೆರಿಗೆ’ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದಿರುವ ಜಿಎಸ್‌ಟಿಯು ದಶಕಗಳಿಂದ ಚಾಲ್ತಿಯಲ್ಲಿ ರುವ ಹಳೆಯ ತೆರಿಗೆ ವ್ಯವಸ್ಥೆಯನ್ನು ತೊಡೆದು ಹಾಕಲಿದೆ.

ಜಿಎಸ್‌ಟಿ ಜಾರಿಗಾಗಿ ಮಧ್ಯರಾತ್ರಿ ವಿಶೇಷ ಅಧಿವೇಶನವನ್ನು ಕರೆದಿರುವುದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪವ್ಯಕ್ತವಾಗಿತ್ತು. ಆದರೆ ತಾಂತ್ರಿಕವಾಗಿ ಜೂನ್ 30ರ ಮಧ್ಯರಾತ್ರಿ ಕೊನೆಗೊಂಡು, ಜುಲೈ 1ರಂದು ಜಿಎಸ್‌ಟಿ ಜಾರಿಗೊಳ್ಳುವುದರಿಂದ ಈ ಅಧಿವೇಶನವನ್ನು ಮಧ್ಯರಾತ್ರಿಯಲ್ಲಿಯೇ ಹಮ್ಮಿಕೊಂಡಿರುವುದಾಗಿ ಕೇಂದ್ರ ಸರಕಾರ ಸಮಜಾಯಿಷಿ ನೀಡಿದೆ. ಜಿಎಸ್‌ಟಿಯನ್ನು ತರಾತುರಿಯಿಂದ ಜಾರಿಗೊಳಿಸಲಾಗಿದ್ದು, ಜನಸಾಮಾನ್ಯರು ಹಾಗೂ ವರ್ತಕರ ಹಿತವನ್ನು ಕಡೆಗಣಿಸಲಾಗಿದೆಯೆಂಬುದು ಪ್ರತಿಪಕ್ಷಗಳ ಆರೋಪವಾಗಿದೆ.

 

ವಿಶೇಷ ಅಧಿವೇಶನಕ್ಕೆ ಕೇಂದ್ರ ಸರಕಾರವು ಎಲ್ಲಾ ಸಂಸತ್ ಸದಸ್ಯರು, ಮುಖ್ಯಮಂತ್ರಿಗಳು ಹಾಗೂ ರಾಜ್ಯ ಹಣಕಾಸು ಸಚಿವರಿಗೆ ಆಹ್ವಾನ ನೀಡಿತ್ತು. ಪ್ರತಿಪಕ್ಷಗಳಾದ ಕಾಂಗ್ರೆಸ್, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್, ಡಿಎಂಕೆ ಹಾಗೂ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ, ಅಧಿವೇಶನದಲ್ಲಿ ಪಾಲ್ಗೊ ಳ್ಳುವುದಿಲ್ಲವೆಂದು ಮುಂಚಿತವಾಗಿಯೇ ಘೋಷಿಸಿದ್ದವು.

Also Read  2022-23 ಸಾಲಿನ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿ ದರದಲ್ಲಿ ಏರಿಕೆ

ಜಯಲಲಿತಾ ಆಡಳಿತದಲ್ಲಿ ಜಿಎಸ್‌ಟಿಯನ್ನು ಬಲವಾಗಿ ವಿರೋಧಿಸಿದ್ದ ಅಣ್ಣಾಡಿಎಂಕೆ, ಇಂದಿನ ಅಧಿವೇಶನದಲ್ಲಿ ಪಾಳ್ಗೊಂಡಿದೆ.

ಕೃಪೆ: ವಾರ್ತಾಭಾರತಿ

error: Content is protected !!
Scroll to Top