ಚಂದ್ರಯಾನ- 4ಕ್ಕೆ ಕೇಂದ್ರದಿಂದ 2100 ಕೋಟಿ ರೂ. ಅನುದಾನ..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ. 19. ಚಂದ್ರನ ಮೇಲೆ ಲ್ಯಾಡರ್‌ ಇಳಿಸಿ ಚಂದ್ರಯಾನ-3 ಯಶಸ್ವಿಯಾಗಿಸಿ ಇತಿಹಾಸ ನಿರ್ಮಿಸಿದ್ದ ಭಾರತ ಇದೀಗ ಚಂದ್ರನಿಂದ ಮಾದರಿ ಸಂಗ್ರಹಿಸುವ 4ನೇ ಚಂದ್ರಯಾನ ಯೋಜನೆಗೆ ಮುಂದಾಗಿದ್ದು, ಇದಕ್ಕಾಗಿ 2104 ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.


ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌, 2040ಕ್ಕೆ ಭಾರತ ಕೈಗೊಳ್ಳಲು ನಿರ್ಧರಿಸಿರುವ ಮಾನವ ಸಹಿತ ಚಂದ್ರಯಾನ ಯೋಜನೆಗೆ ಪೂರಕವಾಗಿ ಚಂದ್ರಯಾನ-4 ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಚಂದ್ರನ ಮೇಲೆ ಇಳಿಯಲು, ಮತ್ತೆ ಅಲ್ಲಿಂದ ಉಡಾವಣೆಯಾಗಲು ಬೇಕಾಗುವ ಸಾಧನಗಳನ್ನು ಈ ಯೋಜನೆ ಒಳಗೊಂಡಿದೆ ಎಂದರು. ಈ ಸಾಧನೆಯ ಮೂಲಕ ಚಂದ್ರನ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ತರಲು ಯಶಸ್ವಿಯಾದರೆ, ಈ ಸಾಧನೆ ಮಾಡಿದ 5ನೇ ದೇಶ ಎಂಬ ಖ್ಯಾತಿಯನ್ನು ಭಾರತ ಪಡೆದುಕೊಳ್ಳಲಿದೆ. ಈಗಾಗಲೇ ರಷ್ಯಾ, ಅಮೆರಿಕ, ಜಪಾನ್‌ ಮತ್ತು ಚೀನ ಇದರಲ್ಲಿ ಯಶಸ್ವಿಯಾಗಿವೆ. ಚಂದ್ರಯಾನ-4 ಚಂದ್ರನ ಮೇಲ್ಮೆ„ಯ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ತರುವ ಯೋಜನೆಯಾಗಿದೆ. ಇದು ಲ್ಯಾಂಡರ್‌, ರೋವರ್‌ಗಳ ಜತೆಗೆ ಮರುಉಡಾವಣೆ ವಾಹನವನ್ನು ಒಳಗೊಂಡಿರಲಿದೆ. ಚಂದ್ರನ ಅಂಗಳವನ್ನು ತಲುಪಿದ ಬಳಿಕ ಅಲ್ಲಿ ಮಾದರಿಯನ್ನು ಸಂಗ್ರಹಿಸಿ, ಈ ಉಪಕರಣ ಮತ್ತೆ ಉಡಾವಣೆಗೊಂಡು ಭೂಮಿಗೆ ತಲುಪಲಿದೆ. 2028ಕ್ಕೆ ಇದನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸಿರುವುದಾಗಿ ತಿಳಿದುಬಂದಿದೆ.

error: Content is protected !!
Scroll to Top