(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 24. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕೆನ್ನುವ ಕಾತರದಿಂದ ಇದ್ದವರಿಗೆ ಗುಡ್ ನ್ಯೂಸ್ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 5,280 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆಸಕ್ತ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ನವೆಂಬರ್ 22ರಿಂದ ಡಿಸೆಂಬರ್ 12ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಹತೆ- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (Integrated Dual Degree-IDD) ಸೇರಿದಂತೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಾಸ್ಟ್ ಅಕೌಂಟೆಂಟ್‌ನಂತಹ ಪದವಿ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ ಮತ್ತು ಅರ್ಜಿ ಶುಲ್ಕ- ಅಭ್ಯರ್ಥಿಯ ಕನಿಷ್ಠ ವಯೋಮಿತಿ 21 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
ಆಯ್ಕೆ ವಿಧಾನ- ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಟೆಸ್ಟ್, ಸಂದರ್ಶನ, ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆನ್‌ಲೈನ್ ಪರೀಕ್ಷೆಯು 120 ಅಂಕಗಳ ಒಬ್ಜೆಕ್ಟಿವ್ ಪರೀಕ್ಷೆ ಮತ್ತು 50 ಅಂಕಗಳ ವಿವರಣಾತ್ಮಕ ಪರೀಕ್ಷೆಯನ್ನು ಒಳಗೊಂಡಿದೆ. ಅಬ್ಜಕ್ಟಿವ್ ಪರೀಕ್ಷೆ ಮುಗಿದ ತಕ್ಷಣ ವಿವರಣಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ಅಭ್ಯರ್ಥಿಗಳು ತಮ್ಮ ವಿವರಣಾತ್ಮಕ ಪರೀಕ್ಷಾ ಉತ್ತರಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಬೇಕಾಗುತ್ತದೆ. ಪರೀಕ್ಷೆಯು 2024ರ ಜನವರಿಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.sbi.co.in.ಗೆ ಭೇಟಿ ನೀಡಿ.