(ನ್ಯೂಸ್ ಕಡಬ) newskadaba.com ನವದೆಹಲಿ, ಅ. 15. ಚಂದ್ರಯಾನದ ನಂತರ ಮತ್ತೊಂದು ಮೈಲುಗಲ್ಲಿಗೆ ಇಸ್ರೋ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಮುಂದಾಗಿದ್ದು, ಇದರ ಪರೀಕ್ಷಾರ್ಥ ಇದೇ ತಿಂಗಳಲ್ಲಿ ಉಡಾವಣೆ ಪ್ರಕ್ರಿಯೆ ನಡೆಯಲಿರುವುದಾಗಿ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಈಗಾಗಲೇ ಚಂದ್ರಯಾನ ಹಾಗೂ ಸೂರ್ಯಯಾನ ಯೋಜನೆಗಳನ್ನು ಯಶಸ್ವಿಗೊಳಿಸಿ ಇತಿಹಾಸ ನಿರ್ಮಿಸಿದೆ. ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಿರುವ ಇಸ್ರೋ, ಮಾನವ ಸಹಿತ ಗಗನಯಾನದ ಯೋಜನೆಗೆ ಸಿದ್ಧತೆ ಮಾಡಿದೆ. ಇದಕ್ಕೂ ಮುನ್ನ ನಡೆಯುವ ಪರೀಕ್ಷಾರ್ಥ ಉಡಾವಣೆಯನ್ನು ಈ ತಿಂಗಳ ಅಂತ್ಯಕ್ಕೆ ನಡೆಸಲಾಗುವುದು ಎಂದು ಇಸ್ರೋ ಕೆಲ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಉಡ್ಡಯನ ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದೆನ್ನಲಾಗಿದೆ.
ಈ ರೀತಿಯ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲಾ ಉಪಕರಣಗಳನ್ನು ಹಾಗೂ ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದೆ. ಈ ಮಾನವಸಹಿತ ಗಗನಯಾನಕ್ಕೂ ಮುನ್ನ ಮೂರು ಟೆಸ್ಟ್‌ಗಳಿದ್ದು, ಮುಂದಿನ ವರ್ಷ ಮತ್ತೊಂದು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು. ‘ವ್ಯೋಮ ಮಿತ್ರ’ ಹೆಸರಿನ ಮಹಿಳಾ ರೊಬೋಟ್ ಅನ್ನು ಕಳುಹಿಸಲಾಗುವುದು ಎಂದು ಇಸ್ರೋ ಹೇಳಿದೆ. ನಂತರ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ಲಾನ್ ಮಾಡಿರುವುದಾಗಿ ವರದಿ ತಿಳಿಸಿದೆ.