(ನ್ಯೂಸ್ ಕಡಬ) newskadaba.com ನವದೆಹಲಿ, ಆ. 20. ದೇಶದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ 3 ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಎರಡನೇ ಮತ್ತು ಅಂತಿಮ ಹಂತದ ಡೀಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಕ್ರಮ್ ಲ್ಯಾಂಡರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಸ್ರೋ ತಿಳಿಸಿದೆ.
ವಿಕ್ರಮ್ ಲ್ಯಾಂಡರ್, ಈಗಾಗಲೇ ಚಂದ್ರನಿಗೆ ಅತ್ಯಂತ ಸಮೀಪವಿರುವ ಬಿಂದು 25 ಕಿ.ಮೀ ಮತ್ತು ಚಂದ್ರನಿಂದ 134 ಕಿ.ಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತಿದೆ ಎಂದು ಇಸ್ರೋ ಹೇಳಿದೆ.
ಚಂದ್ರಯಾನ ನೌಕೆಯು ಆ. 23ರ ಬುಧವಾರದಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಆಗಲಿದ್ದು, ಅದಕ್ಕೂ ಮುನ್ನ ನಿರ್ಣಾಯಕ ಹಂತದ ಎರಡನೇ ಡೀಬೂಸ್ಟಿಂಗ್ ಅನ್ನು ಯಶಸ್ವಿಯಾಗಿಸಿದೆ. ಆ. 23 ರಂದು ಲ್ಯಾಂಡಿಂಗ್ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಇಸ್ರೋ ಟ್ವಿಟರ್ ನಲ್ಲಿ ತಿಳಿಸಿದೆ.