ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ ಹಿನ್ನೆಲೆ ► ಧರ್ಮಸ್ಥಳದ ಸುತ್ತ ‘ನ್ಯೂಸ್ ಕಡಬ’ದ ಒಂದು ನೋಟ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.27.  ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 29 ಭಾನುವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಕಾರ್ಯಕ್ರಮ ಸಿದ್ಧತೆ ಬಿರುಸಿನಿಂದ ಸಾಗಿದೆ. ಭದ್ರತೆ, ವಾಹನ ಪಾರ್ಕಿಂಗ್, ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಿಭಾಯಿಸಲು ರೂಪುರೇಷೆ ತಯಾರಿಸಲಾಗಿದೆ.

ಭದ್ರತೆಗೆ ಸಜ್ಜಾಗಿದೆ ಖಾಕಿ ಪಡೆ, ಸಿಸಿ ಕ್ಯಾಮೆರಾ ಕಣ್ಗಾವಲು
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ನೀಡಲಿರುವ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಬಿಗಿ ಭದ್ರತೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಸುಮಾರು 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಹೊರ ಜಿಲ್ಲೆಗಳ ಪೊಲೀಸರನ್ನು ಕರೆಸಲಾಗುತ್ತಿದೆ. ಧರ್ಮಸ್ಥಳ ಮತ್ತು ಉಜಿರೆ ಹೆಲಿಪ್ಯಾಡ್‌ ಹಾಗೂ ಧರ್ಮಸ್ಥಳದಿಂದ ಉಜಿರೆ ಮಾರ್ಗದಲ್ಲಿ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದ್ದು, ಧರ್ಮಸ್ಥಳ ಉಜಿರೆ ನಡುವೆ ರವಿವಾರ ಬೆಳಗ್ಗೆ 9 ಗಂಟೆಯ ನಂತರ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಪ್ರಧಾನಿಯವರ ವಿಶೇಷ ಭದ್ರತಾ ಪಡೆ ಎಸ್‌ಪಿಜಿ ಅಧಿಕಾರಿಗಳ ಜತೆ ಪೊಲೀಸ್‌ ಇಲಾಖೆ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಸ್‌ಪಿಜಿ ಹಿರಿಯ ಅಧಿಕಾರಿಗಳು, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಮತ್ತು ಇತರ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

Also Read  ವಿಶೇಷ ಪೊಲೀಸ್ ಅಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಜಿರೆಯಲ್ಲಿ ತೆರೆಯಲಿದೆ ಪ್ರಧಾನಿ ಕಛೇರಿ
ದೂರದರ್ಶನದಲ್ಲಿ ಕಾರ್ಯಕ್ರಮದ ನೇರಪ್ರಸಾರ ಇರಲಿದ್ದು, ಇದಕ್ಕಾಗಿ ಬಿಎಸ್‌ಎನ್‌ಎಲ್‌ ಹಾಗೂ ಮೆಸ್ಕಾಂನವರಿಗೆ ಪ್ರತ್ಯೇಕ ಸೂಚನೆಗಳನ್ನು ನೀಡಿ ದೂರವಾಣಿ, ವೈಫೈ, ನಿರಂತರ ವಿದ್ಯುತ್‌ ಸರಬರಾಜಿಗೆ ಸೂಚಿಸಲಾಗಿದೆ. ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ ಪಕ್ಕದಲ್ಲೇ ಪ್ರಧಾನಿ ಕಚೇರಿಯನ್ನು ತಾತ್ಕಾಲಿಕವಾಗಿ ತೆರೆಯಲಾಗುತ್ತಿದ್ದು, ಪ್ರಧಾನಿ ಕಚೇರಿಯ ಸಿಬಂದಿಗಳೇ ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಸಭೆಯಲ್ಲಿ ಪಾಲ್ಗೊಳ್ಳಲು ಆಧಾರ್ ಕಡ್ಡಾಯ
ಸಭೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಆಧಾರ್‌ ಕಾರ್ಡ್ ಕಡ್ಡಾಯ ಮಾಡಲಾಗಿದೆ. ವಿಐಪಿ ಪಾಸ್‌ ಇದ್ದವರಿಗೆ ಆಧಾರ್‌ ಅಥವಾ ಭಾವಚಿತ್ರ ಇರುವ ಗುರುತು ಚೀಟಿ ಕಡ್ಡಾಯ ಮಾಡಲಾಗಿದ್ದು ಪಾಸ್‌ ಇಲ್ಲದೆ ಪ್ರವೇಶ ಬಯಸುವವರಿಗೆ ಆಧಾರ್‌ ಇರಬೇಕೇ ಬೇಡವೇ ಎಂಬ ಗೊಂದಲ ಇಂದು (ಶುಕ್ರವಾರ)  ಸಂಜೆ ವೇಳೆಗೆ ಪರಿಹಾರವಾಗಲಿದೆ.

1 ಲಕ್ಷ ಜನ ಸೇರುವ ನಿರೀಕ್ಷೆ
ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಸಾಕಷ್ಟು ಸಂಖ್ಯೆಯ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಆದರೂ ಜನರ ಆಗಮನ ಹೆಚ್ಚಾಗುವ ಕಾರಣ ನೆಲದಲ್ಲಿ ಕುಳಿತುಕೊಳ್ಳಲು ದಿನಪತ್ರಿಕೆ ಅಥವಾ ಬಟ್ಟೆ ತರುವುದು ಒಳಿತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಬಾಟಲ್ ಕೊಂಡೊಯ್ಯಲು ಅವಕಾಶ ನೀಡಿಲ್ಲ. ಮೊಬೈಲ್‌ ಫೋನನ್ನು ತೆಗೆದುಕೊಂಡು ಹೋದರೂ ಜಾಮರ್‌ ಅಳವಡಿಸಲಾಗುವುದರಿಂದ ನೆಟ್ವರ್ಕ್ ಸಮಸ್ಯೆ ಕಾಡಲಿದೆ.

Also Read  ಚಾಲಕನ ನಿಯಂತ್ರನ ತಪ್ಪಿ ಸೇತುವೆಯಿಂದ ಕಣಿವೆಗೆ ಬಿದ್ದ ಬಸ್

ಒಟ್ಟಿನಲ್ಲಿ ಧರ್ಮಸ್ಥಳವೆಂಬ ಪುಣ್ಯಸ್ಥಳ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಗಳೊಂದಿಗೆ ಜಗಮಗಿಸಲಿದೆ.

error: Content is protected !!
Scroll to Top