(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.12. ಕಡಬದಲ್ಲಿ ಇತ್ತೀಚೆಗೆ ಮಹಿಳೆ ಮತ್ತು ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆದ ಸಂದರ್ಭದಲ್ಲಿ ಕಡಬ ಪೊಲೀಸರು ಮಾನವೀಯತೆ ಇಲ್ಲದ ಕುರುಡರಾಗಿದ್ದರು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಶ್ಯಾಮಲಾ ಕುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ತೆಯನ್ನು ಮಂಗಳವಾರದಂದು ಭೇಟಿಯಾಗಿ ಸಮಸ್ಯೆ ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆ ಆ್ಯಸಿಡ್ ಉರಿ ತಾಳದೇ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ನಡೆದುಕೊಂಡ ವರ್ತನೆ ಖಂಡನಾರ್ಹ ಆಗಿದ್ದು, ಸಂತ್ರಸ್ತೆ ಪೊಲೀಸರ ಮೇಲಿಟ್ಟ ಭರವಸೆ ಇಲ್ಲಿ ಹುಸಿಯಾಗಿದೆ ಎಂದರು. ಕರೆಗೆ ಸ್ಪಂದಿಸದಿದ್ದಾಗ ಮಹಿಳೆ ಘಟನಾ ಸ್ಥಳದಿಂದ ಮೂರು ಕಿ.ಮೀ. ದೂರದ ಪೊಲೀಸ್ ಠಾಣೆಗೆ ಉರಿ ತಾಳಿಕೊಂಡು ನಡೆದುಕೊಂಡೇ ತೆರಳಿದ್ದಾರೆ. ಈ ಸಂದರ್ಭ ದೂರನ್ನು ಲಿಖಿತವಾಗಿ ಬರೆದು ಕೊಡಲು ಸೂಚಿಸಿದ್ದರು. ‘ಉರಿ ತಾಳಲಾಗುತ್ತಿಲ್ಲ; ಬರೆದುಕೊಡಲಾಗಲ್ಲ’ ಎಂದು ಅಂಗಲಾಚುತ್ತಿದ್ದರೂ ಕೂಡಲೇ ಸ್ಪಂದಿಸಿಲ್ಲ. ಸಂತ್ರಸ್ತೆಯನ್ನು ಪೊಲೀಸರು ಆಸ್ಪತ್ರೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡಿ ಬಳಿಕ ದೂರು ಪಡೆಯಬಹುದಿತ್ತು. ಈ ವೇಳೆ ಪೊಲೀಸರ ಮಾನವೀಯತೆ ಮಣ್ಣಾಗಿತ್ತೇ ಎಂದು ಕಿಡಿ ಕಾರಿದರು.
ಪೊಲೀಸರ ಒತ್ತಡದ ಕೆಲಸದ ಬಗ್ಗೆ ಕನಿಕರವಿದ್ದು, ಮಾನವೀಯತೆ ಮೆರೆಯಬೇಕಾದ ಸಂದರ್ಭದಲ್ಲಿ ಮನಸುಗಳು ಕಲ್ಲಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸಂತ್ರಸ್ತೆಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ನಿನ್ನ ಜತೆ ಇರಲಿದೆ ಎಂದು ಸಂತ್ರಸ್ತೆಗೆ ಮಾನಸಿಕವಾಗಿ ಸ್ಥೈರ್ಯ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯೂನಿಂದ ಸುಮೊಟೊ ಕೇಸು ದಾಖಲಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಸಲಹೆ-ಸೂಚನೆ ನೀಡಿದ್ದೇನೆ. ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪತ್ರ ಬರೆದು, ಶೀಘ್ರ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು. ಪ್ರಕರಣದ ತನಿಖೆ ಹಾಗೂ ಕರ್ತವ್ಯ ಲೋಪ ಎಸಗಿರುವ ಪೊಲೀಸರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಂದ ಮಾಹಿತಿ ಪಡೆದು, ಸೂಚನೆ ನೀಡಲಾಗಿದೆ. ಒಂದು ತಿಂಗಳು ನಂತರ ಪ್ರಕರಣದ ಬೆಳವಣಿಗೆಯ ಮಾಹಿತಿಯನ್ನು ಪಡೆಯಲಿದ್ದೇನೆ ಎಂದರು.