ಹೊಸದಿಲ್ಲಿ, ಜ.7: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸುವಂತೆ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ಆರೋಪಿಯ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಒಂದು ತಿಂಗಳ ನಂತರ ನಾಲ್ವರು ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಮಂಗಳವಾರ ಡೆತ್ ವಾರಂಟ್ ಜಾರಿ ಮಾಡಿದೆ.
ಕಾನೂನಿನ ಪ್ರಕಾರ, ಅಪರಾಧಿಗಳಿಗೆ ಲಭ್ಯವಾಗಬೇಕಾದ ಎಲ್ಲಾ ಕಾನೂನು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿದ ನಂತರ ಕೊನೆಯ ಹಂತವಾದ ಮರಣದಂಡನೆ ಪ್ರಕ್ರಿಯೆಗಾಗಿ ಕೋರ್ಟ್ ಡೆತ್ ವಾರಂಟ್ ಹೊರಡಿಸುತ್ತದೆ.
2012ರ ಡಿಸೆಂಬರ್ 16ರಂದು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದರು. ಕೆಲವು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ನಿರ್ಭಯಾ ಸಾವನ್ನಪ್ಪಿದ್ದಳು. ಈ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.