(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21. ಪೌರತ್ವ ವಿರೋಧಿಸಿ ತುಳುನಾಡಿನಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಎರಡು ಜೀವಗಳು ಬಲಿಯಾಗಿದ್ದು ಆಯಿತು. ಕರ್ಫ್ಯೂ ಹಾಕಿ ಜನಜೀವನ ಅಸ್ತವ್ಯಸ್ತ ಆಗಿದ್ದೂ ಆಯಿತು. ಇದೀಗ ಕಲ್ಲೆಸೆತವನ್ನು ಟ್ರೋಲ್ ಮಾಡುತ್ತಾ ಸಂಸದ ನಳಿನ್ ಕುಮಾರ್ ಕಟೀಲ್ ರ ನಕಲಿ ಟ್ವೀಟೊಂದು ನೆಟ್ಟಿಗರಿಗೆ ಆಹಾರವಾಗುತ್ತಿದೆ.
ಮಂಗಳೂರಿನ ಮುಖ್ಯದ್ವಾರವಾದ ಪಂಪ್ ವೆಲ್ ನಲ್ಲಿ ಕಳೆದ 9 ವರ್ಷಗಳಿಂದ ನಿರ್ಮಿಸುತ್ತಿರುವ ಫ್ಲೈಓವರ್ ಕಾಮಗಾರಿಯ ಉದ್ಘಾಟನೆಗೆ ಹಲವು ಸಲ ದಿನಾಂಕ ನಿಗದಿಯಾಗಿ ಕೊನೆಯ ಹಂತದಲ್ಲಿ ಕಾಮಗಾರಿ ಪೂರ್ತಿಯಾಗದೆ ಮುಂದೂಡಲ್ಪಟ್ಟಿತ್ತು. 2020 ಜನವರಿ ಮೊದಲ ವಾರದಲ್ಲಿ ಫ್ಲೈಓವರ್ ಉದ್ಘಾಟನೆ ನಡೆಯಲಿದೆ ಎಂದು ಈ ಹಿಂದೆ ಸಂಸದ ನಳಿನ್ ಕುಮಾರ್ ಹೇಳಿದ್ದು, ಇದೀಗ ‘ನನ್ನ ಪ್ರೀತಿಯ ಮಂಗಳೂರಿಗರೇ, ಡಿ.19 ರಂದು ಮಂಗಳೂರಿನಲ್ಲಿ ನಡೆದ #CAA ವಿರುದ್ಧದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಲು ಪಂಪ್ ವೆಲ್ ಸೇತುವೆ ಕಾಮಗಾರಿಗೆ ತಂದಿದ್ದ ಜಲ್ಲಿಕಲ್ಲುಗಳನ್ನು ಉಪಯೋಗಿಸಿರುವುದರಿಂದ ಸೇತುವೆ ಕಾಮಗಾರಿಗೆ ಜಲ್ಲಿಕಲ್ಲಿನ ಅಭಾವ ಉಂಟಾಗಿದೆ. ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸೇತುವೆ ಕಾಮಗಾರಿ ನಡೆಸಲು ಅಡಚಣೆಯುಂಟಾಗಿದೆ. ಹೀಗಾಗಿ ಜನವರಿ 1ಕ್ಕೆ ಸೇತುವೆ ಉದ್ಘಾಟನೆ ಅಸಾಧ್ಯವಾಗಿದೆ. ಕ್ಷಮೆಯಿರಲಿ. #Pumpwell #PumpwellFlyover #CAAProtest ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿರುವಂತೆ ಅವರ ಟ್ವೀಟನ್ನು ಎಡಿಟ್ ಮಾಡಿರುವ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮಂಗಳೂರಿನ ಕಲ್ಲೆಸೆತವು ಪಂಪ್ ವೆಲ್ ಸರ್ಕಲ್ ಮೂಲಕ ಮತ್ತೆ ನೆಟ್ಟಿಗರಿಗೆ ಆಹಾರವಾಗಿದೆ.