ಮಂಗಳೂರು: ಬೃಹತ್ ಪ್ರಮಾಣದ ಗಾಂಜಾ ವಶಕ್ಕೆ; ವ್ಯಕ್ತಿ ಅರೆಸ್ಟ್!

(ನ್ಯೂಸ್‌ ಕಡಬ) newskadaba.com, ನ 06 . ಮಂಗಳೂರು. ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 23 ವರ್ಷದ ಯುವಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3 ಕೆ.ಜಿ. 800 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಪುತ್ತೂರು ತಾಲೂಕಿನ ಪಡ್ನೂರು ನಿವಾಸಿ ಮೊಹಮ್ಮದ್ ನಿಸಾರ್ (23) ಎಂದು ಗುರುತಿಸಲಾಗಿದೆ. ನ.05ರಂದು ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ₹1.90 ಲಕ್ಷ ಮೌಲ್ಯದ ಗಾಂಜಾ, ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ₹3.94 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Scroll to Top