ಬೆಂಗಳೂರಲ್ಲಿ ಭೀಕರ ಹತ್ಯಾಕಾಂಡ: ಒಂದೇ ವಾರದಲ್ಲಿ ಪತ್ನಿ ಸೇರಿದಂತೆ 7 ಮಂದಿಯ ಬಲಿ ಪಡೆದ ಕ್ಯಾಬ್ ಚಾಲಕ!

(ನ್ಯೂಸ್‌ ಕಡಬ) newskadaba.com, ನ 06 . ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 53 ವರ್ಷದ ಕ್ಯಾಬ್ ಚಾಲಕನೊಬ್ಬ 7 ವರ್ಷದ ಬಾಲಕ ಸೇರಿದಂತೆ ತನ್ನ ಪತ್ನಿಯ ಕುಟುಂಬದ 7 ಸದಸ್ಯರನ್ನು ಒಂದೇ ವಾರದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಅತ್ಯಂತ ಆಘಾತಕಾರಿ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.ಆರೋಪಿಯನ್ನು ಇಂದುಶೇಖರ್ ಎಂದು ಗುರುತಿಸಲಾಗಿದ್ದು, ಪತ್ನಿ ಸುನೀತಾಳ ಕಡೆಯವರಿಂದ ಬೆಂಬಲ ಸಿಗುತ್ತಿತ್ತು ಎಂಬ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.ಮೊದಲು ಪತ್ನಿ ಸುನೀತಾಳನ್ನು ರುಬ್ಬುವ ಕಲ್ಲಿನಿಂದ ಕೊಲೆ ಮಾಡಿ, ಮೃತದೇಹವನ್ನು ನಂದಿ ಬೆಟ್ಟದ ಬಳಿ ಎಸೆದಿದ್ದ.

ನಂತರ ಸೋದರಮಾವಂದಿರಾದ ಶಿವಕುಮಾರ್ ಹಾಗೂ ಶಂಕರ್ ಅವರನ್ನು ಪಾರ್ಟಿಗೆ ಆಹ್ವಾನಿಸಿ ಅವರೂ ಸೇರಿದಂತೆ ಅತ್ತೆ ರೂಪವತಿ, ದಿವ್ಯಾ, ನಳಿನಿ ಹಾಗೂ 7 ವರ್ಷದ ಬಾಲಕ ಪುನೀತ್ ಸೇರಿದಂತೆ ಒಟ್ಟು 7 ಜನರನ್ನು ಹತ್ಯೆ ಮಾಡಿದ್ದಾನೆ.ರಕ್ತದ ಕಲೆಗಳನ್ನು ಮರೆಮಾಚಲು ರಾಸಾಯನಿಕಗಳನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸಿರುವುದು ತನಿಖೆಯಿಂದ ಬಯಲಾಗಿದೆ.

ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ನಾಪತ್ತೆ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರಾಜಾಜಿನಗರ ಹಾಗೂ ಶ್ರೀರಾಂಪುರ ಪೊಲೀಸರು ಪ್ರಕರಣದ ಪ್ರತ್ಯೇಕ ತನಿಖೆ ಮುಂದುವರೆಸಿದ್ದಾರೆ.

Scroll to Top