(ನ್ಯೂಸ್ ಕಡಬ) newskadaba.com ಆ. 28. ಖಾಸಗಿ ತರಬೇತಿ ವಿಮಾನ ಅಪಘಾತ ಸಂಭವಿಸಿದ ಪರಿಣಾಮ ಉಡುಪಿ ಮೂಲದ ತರಬೇತಿ ಪೈಲಟ್ ಓರ್ವ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತ ಯುವಕನನ್ನು ಅಭಿಷೇಕ್ ಪೂಜಾರಿ(22) ಎಂದು ಗುರುತಿಸಲಾಗಿದೆ. ಅಭಿಷೇಕ್ ಪೂಜಾರಿಯವರು ಮೂಲತಃ ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ನಿವಾಸಿ. ವರದಿಯ ಪ್ರಕಾರ, ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅಭಿಷೇಕ್ ಅವರ ತಂದೆ ಪ್ರಭಾಕರ್ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ತಮ್ಮ ಕುಟುಂಬದೊಂದಿಗೆ ಆಗಾಗ ಕಣಜಾರು ಗ್ರಾಮದ ಕಾಡೆಬರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು.
ಅಪಘಾತದ ಮಾಹಿತಿ ತಿಳಿದ ಕುಟುಂಬಸ್ಥರು ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.













