(ನ್ಯೂಸ್ ಕಡಬ) newskadaba.com, ಜು.27: ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಆಂದೋಲನ ನಡೆಸುವುದು ಪ್ರಜೆಗಳ ಮೂಲಭೂತ ಹಕ್ಕು. ಕೇವಲ ಪ್ರತಿಭಟನೆ ಎಂಬ ಕಾರಣಕ್ಕಾಗಿಯೇ ಲಾಠಿಚಾರ್ಜ್ ಮಾಡಲು ಬರುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.
ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ಮಿತಿಮೀರಿದ ಬಲಪ್ರಯೋಗ ನಡೆಸಿದ್ದರೆ ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗುತ್ತದೆ. ಜೊತೆಗೆ, ಇಂತಹ ಸನ್ನಿವೇಶಗಳನ್ನು ನಿರ್ವಹಿಸಲು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಪೊಲೀಸ್ ಶಿಷ್ಟಾಚಾರ ಜಾರಿಗೆ ತರುವುದು ಅತ್ಯಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬಗಳ ಪರ ವಕೀಲರಿಗೂ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿತು. “ವಿದ್ಯಾರ್ಥಿಗಳಾಗಲಿ ಅಥವಾ ಪೊಲೀಸರಾಗಲಿ, ಯಾರಿಗೇ ಗಾಯಗಳಾದರೂ ಅದು ಸಮಾನ ಕಾಳಜಿಯ ವಿಷಯ” ಎಂದ ನ್ಯಾಯಪೀಠ, ಪ್ರತಿಭಟನೆ ವೇಳೆ ಪೊಲೀಸರ ರಕ್ಷಣೆಗೆ ಅಗತ್ಯವಿರುವ ಹೆಲ್ಮೆಟ್ ಹಾಗೂ ಉಪಕರಣಗಳನ್ನು ಏಕೆ ಒದಗಿಸಿಲ್ಲ ಎಂಬ ಬಗ್ಗೆ ರಾಜ್ಯ ಸರ್ಕಾರಗಳಿಂದ ಉತ್ತರ ಕೇಳಲಾಗುವುದು ಎಂದು ತಿಳಿಸಿತು.







