ಕೃಷಿ ಭೂಮಿಯಲ್ಲಿ ಸಿಕ್ಕಿತು ಅಪರೂಪದ ನಿಧಿ: ನೆಲಮಂಗಲದಲ್ಲಿ ಬಯಲಾಯ್ತು ಗಂಗರ ರಾಜಧಾನಿ ‘ಮಣ್ಣೆ’ ಕಾಲದ ಇತಿಹಾಸ!

(ನ್ಯೂಸ್‌ ಕಡಬ) newskadaba.com,  ಜು.25:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದ ರಂಗಸ್ವಾಮಯ್ಯ ಎಂಬುವವರ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ 8ನೇ ಶತಮಾನದ ಗಂಗರ ಕಾಲದ ಅಪರೂಪದ ಶಿಲಾಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದೆ.ಖ್ಯಾತ ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇದು ಹಳೆಯ ಕನ್ನಡ ಲಿಪಿಯಲ್ಲಿರುವ ಗಂಗರ ಕಾಲದ ಅತ್ಯಮೂಲ್ಯ ಶಾಸನ ಎಂದು ದೃಢಪಡಿಸಿದ್ದಾರೆ.

ಗಂಗರ ರಾಜಧಾನಿ ‘ಮಣ್ಣೆ’ (ಮಾನ್ಯಪುರ) ಕಾಲದಲ್ಲಿ, ನಾಡಗೌಡ ಮಾರಮ್ಮನ ಸೇವಕನಾಗಿದ್ದ ಸಿವಮರೆನಾದಿ ಎಂಬ ವೀರನು ಗ್ರಾಮಕ್ಕೆ ದಾಳಿ ಮಾಡಿದ ಕ್ರೂರ ಹುಲಿಯೊಂದಿಗೆ ಹೋರಾಡಿ, ಜನರನ್ನು ರಕ್ಷಿಸಿ ವೀರಮರಣ ಹೊಂದಿದ ಕಥೆಯನ್ನು ಈ ಶಾಸನ ವಿವರಿಸುತ್ತದೆ.

ವೀರಗಲ್ಲಿನಲ್ಲಿ ವೀರನು ಒಂದು ಕೈಯಲ್ಲಿ ಹುಲಿಯನ್ನು ಬಿಗಿಯಾಗಿ ಹಿಡಿದು ಮತ್ತೊಂದು ಕೈಯಲ್ಲಿ ಕತ್ತಿ ಬೀಸುವ ರೌದ್ರ ದೃಶ್ಯ ಹಾಗೂ ಆತನ ಆತ್ಮವನ್ನು ಅಪ್ಸರೆಯರು ದೇವಲೋಕಕ್ಕೆ ಕರೆದೊಯ್ಯುವ ರಮಣೀಯ ದೃಶ್ಯ ಅತ್ಯದ್ಭುತವಾಗಿ ಕೆತ್ತಲ್ಪಟ್ಟಿದೆ.ಈ ಶಾಸನವು ಗಂಗರ ಕಾಲದ ಆಡಳಿತ, ಪ್ರಾಚೀನ ಕನ್ನಡ ಭಾಷೆಯ ಬೆಳವಣಿಗೆ, ಶಿಲ್ಪಕಲೆ ಮತ್ತು ವೀರ ಸಂಸ್ಕೃತಿಯ ಅಧ್ಯಯನಕ್ಕೆ ಮಹತ್ವದ ದಾಖಲೆಯಾಗಿದೆ.

Scroll to Top