ಮದರ್ ಪ್ರಾಮಿಸ್’ ಸಿನಿಮಾದ ವಿರುದ್ಧ ವ್ಯವಸ್ಥಿತ ದುಷ್ಪ್ರಚಾರ? ಬೇಸರ ಹೊರಹಾಕಿದ ನಟ ಡಾಲಿ ಧನಂಜಯ್

(ನ್ಯೂಸ್ ಕಡಬ) newskadaba.com ಜು. 13. ಡಾಲಿ ಧನಂಜಯ್ ನಟಿಸಿ, ನಿರ್ಮಿಸಿರುವ ‘ಮದರ್ ಪ್ರಾಮಿಸ್‘ ಸಿನಿಮಾಗೆ ಬುಕ್‌ಮೈಶೋ (BookMyShow) ಆ್ಯಪ್‌ನಲ್ಲಿ ಉದ್ದೇಶಪೂರ್ವಕವಾಗಿ ನೆಗೆಟಿವ್ ರೇಟಿಂಗ್ ಹಾಗೂ ವಿಮರ್ಶೆಗಳನ್ನು ಹರಡಿ ಚಿತ್ರಕ್ಕೆ ಹಿನ್ನಡೆ ಉಂಟುಮಾಡುವ ಪ್ರಯತ್ನ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.

ಸಿನಿಮಾ ಉತ್ತಮ ಹಾಸ್ಯ ಶೈಲಿಯನ್ನು ಹೊಂದಿದ್ದರೂ, ಕೆಲವರು ದುರುದ್ದೇಶದಿಂದ 10ಕ್ಕೆ 1 ರೇಟಿಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆ ನೆಗೆಟಿವ್ ವಿಮರ್ಶೆಗಳಿಗೆ ಅತಿ ಹೆಚ್ಚು ಲೈಕ್ಸ್ ಬರುವಂತೆ ಮಾಡಿ, ಅವು ಆ್ಯಪ್‌ ನ ಮೊದಲ ಪುಟದಲ್ಲಿ ಎದ್ದು ಕಾಣುವಂತೆ ಟ್ರೋಲ್ ಮಾಡಲಾಗಿದೆ.

ಈ ಯೋಜಿತ ನೆಗೆಟಿವ್ ವಿಮರ್ಶೆಗಳ ಕಾರಣದಿಂದಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಹಿಂಜರಿಯುತ್ತಿದ್ದು, ಚಿತ್ರದ ಗಳಿಕೆ ಕುಗ್ಗಿದೆ. ಬಿಡುಗಡೆಯಾದ ಮೂರು ದಿನಗಳಲ್ಲಿ ಸಿನಿಮಾ ಕೇವಲ 1.5 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಚಿತ್ರತಂಡದಲ್ಲಿ ಆತಂಕ ಮೂಡಿಸಿದೆ.

ಚಿತ್ರರಂಗದಲ್ಲಿ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿರುವ ಧನಂಜಯ್ ಅವರಿಗೆ ಈ ರೀತಿ ನೆಗೆಟಿವ್ ಪ್ರಚಾರ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಸ್ವತಃ ಧನಂಜಯ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತೀವ್ರ ಬೇಸರ ಹೊರಹಾಕಿದ್ದು, ದುಷ್ಪ್ರಚಾರ ನಂಬದೆ ಸಿನಿಮಾ ನೋಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ಮದರ್ ಪ್ರಾಮಿಸ್‘ ಚಿತ್ರವನ್ನು ಪೂರ್ಣಚಂದ್ರ ಮೈಸೂರು ನಿರ್ದೇಶಿಸಿದ್ದು, ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಧನಂಜಯ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ.

Scroll to Top