(ನ್ಯೂಸ್ ಕಡಬ) newskadaba.com, ಜು.11 : ‘ದೇವರ ಸ್ವಂತ ನಾಡು’ ಕೇರಳದ ವಯನಾಡಿನಲ್ಲಿ ಮತ್ತೊಮ್ಮೆ ಭೀಕರ ಭೂಕುಸಿತ ಸಂಭವಿಸಿದ್ದು, ಇಡೀ ಪ್ರದೇಶ ತಲ್ಲಣಗೊಂಡಿದೆ. ಎರಡು ವರ್ಷಗಳ ಹಿಂದಿನ ದುರಂತದ ನೋವು ಮಾಸುವ ಮುನ್ನವೇ ಪ್ರಕೃತಿ ಮತ್ತೆ ರೌದ್ರಾವತಾರ ತಳೆದಿದೆ. ಆದರೆ, ಈ ಬಾರಿ ಈ ಸರಣಿ ದುರಂತಗಳ ಹಿಂದೆ ಕೇವಲ ಹವಾಮಾನ ವೈಪರೀತ್ಯ ಮಾತ್ರವಲ್ಲದೆ, ಮಾನವನ ಅವೈಜ್ಞಾನಿಕ ಹಸ್ತಕ್ಷೇಪವೂ ಪ್ರಮುಖ ಕಾರಣ ಎಂಬ ಚರ್ಚೆ ತೀವ್ರಗೊಂಡಿದೆ.
ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟಗಳ ಇಳಿಜಾರುಗಳನ್ನು ಕತ್ತರಿಸಿ ರೆಸಾರ್ಟ್‌ಗಳು, ಹೋಂಸ್ಟೇಗಳು ಮತ್ತು ಗ್ಲಾಸ್ ಬ್ರಿಜ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದು ಬೆಟ್ಟಗಳ ನೈಸರ್ಗಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ…ಮರಗಳ ಮಾರಣಹೋಮದಿಂದಾಗಿ ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ನೈಸರ್ಗಿಕ ರಕ್ಷಣಾ ವ್ಯವಸ್ಥೆ ಇಲ್ಲದಂತಾಗಿದೆ.
ಸರ್ಕಾರಿ ದಾಖಲೆಗಳಲ್ಲಿ ಕಡಿಮೆ ಸಂಖ್ಯೆಯ ರೆಸಾರ್ಟ್‌ಗಳಿದ್ದರೂ, ಆನ್‌ಲೈನ್‌ನಲ್ಲಿ ಸಾವಿರಾರು ಅಕ್ರಮ ರೆಸಾರ್ಟ್‌ಗಳು ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿವೆ.ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ನೈಸರ್ಗಿಕ ನೀರು ಹರಿಯುವ ಮಾರ್ಗಗಳನ್ನು ಬದಲಾಯಿಸಲಾಗಿದೆ. ಇದರಿಂದ ಮಳೆಯ ನೀರು ಮಣ್ಣಿನೊಳಗೆ ಸಂಗ್ರಹಗೊಂಡು ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತಿದೆ.
ಅಲ್ಪಾವಧಿಯಲ್ಲಿ ಸುರಿಯುವ ಅತಿ ಭೀಕರ ಮಳೆ ಮತ್ತು ಕ್ಲೌಡ್‌ಬರ್ಸ್ಟ್ (ಮೇಘಸ್ಫೋಟ) ನಂತಹ ಪರಿಸ್ಥಿತಿಗಳು ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನು ಅಪಾಯಕ್ಕೆ ತಳ್ಳುತ್ತಿವೆ.








