ಸಿಮ್ ಕಾರ್ಡ್ ದುರ್ಬಳಕೆ ಮಾಡಿದರೆ ₹50 ಲಕ್ಷ ದಂಡ, 3 ವರ್ಷ ಜೈಲು ಶಿಕ್ಷೆ!

(ನ್ಯೂಸ್‌ ಕಡಬ) newskadaba.com, ಸೆ. 23 . ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ ಅನ್ನು ಮತ್ತೊಬ್ಬರು ದುರ್ಬಳಕೆ ಮಾಡಿದರೆ, ಟೆಲಿಕಾಂ ಗುರುತಿನ ಸಂಖ್ಯೆಗಳ ದುರುಪಯೋಗ, ಐಎಂಇಐ ಸಂಖ್ಯೆಗಳಲ್ಲಿ ಬದಲಾವಣೆ (ಟ್ಯಾಂಪರಿಂಗ್) ಮಾಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.

ಸಿಮ್ ಕಾರ್ಡ್ ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ಮಾಡುವವರಿಗೆ ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಹೀಗಾಗಿ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡನ್ನ ಬೇರೆಯವರು ಬಳಸಲು ಅವಕಾಶ ನೀಡದಂತೆ ದೂರಸಂಪರ್ಕ ಇಲಾಖೆ ಆದೇಶ ಹೊರಡಿಸಿದೆ.

ಅದರಲ್ಲೂ ತಮ್ಮ ಗುರುತಿನ ದಾಖಲೆಗಳನ್ನು ಬಳಸಿ ತಮ್ಮ ಗಮನಕ್ಕೆ ಬಾರದಂತೆ ಯಾರಾದರೂ ಮೊಬೈಲ್ ಸಂಪರ್ಕ ಪಡೆದಿರುವ ಸಾಧ್ಯತೆ ಇರುವುದರಿಂದ, ಗ್ರಾಹಕರು ತಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಖ್ಯೆಗಳು ನೋಂದಣಿಯಾಗಿವೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವಂತೆ ಇಲಾಖೆ ಸೂಚನೆ ನೀಡಿದೆ.

ನಿಮ್ಮ ಹೆಸರಿನಲ್ಲಿ ಪಡೆದ ಸಿಮ್ ಕಾರ್ಡ್ ಅನ್ನು ಮತ್ತೊಬ್ಬರು ಸೈಬರ್ ವಂಚನೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿದರೆ, ಮೂಲ ಸಿಮ್ ಕಾರ್ಡ್ ಚಂದಾದಾರರ ಮೇಲೂ ಕಾನೂನು ಕ್ರಮ ಬರಬಹುದು. ಹಾಗಾಗಿ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು, ವರ್ಗಾಯಿಸುವುದು ಅಥವಾ ಬಳಸಲು ನೀಡಬಾರದು ಎಂದು ಇಲಾಖೆ ತಿಳಿಸಿದೆ.

Scroll to Top