
(ನ್ಯೂಸ್ ಕಡಬ) newskadaba.com, ಸೆ. 23 . ಕುಂದಾಪುರ: ಸಮೀಪದ ಕೋಟೇಶ್ವರದ ಕೋಟಿ ತೀರ್ಥ ಪುಷ್ಕರಣಿಗೆ ಹಾರಿ 37 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬುಧವಾರ ಬೆಳಿಗ್ಗೆ ನೀರಿನಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.
ಮೃತರನ್ನು ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ, ಟೈಲ್ಸ್ ಕಾರ್ಖಾನೆ ಕಾರ್ಮಿಕ ಪದ್ಮನಾಭ ಆಚಾರ್ಯ (37) ಎಂದು ಗುರುತಿಸಲಾಗಿದೆ.ಕಳೆದ ನಾಲ್ಕು ತಿಂಗಳಿಂದ ಕೆಲಸಕ್ಕೆ ತೆರಳದಿದ್ದ ಪದ್ಮನಾಭ ಅವರು ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಟು ರಾತ್ರಿಯಾದರೂ ಹಿಂತಿರುಗಿರಲಿಲ್ಲ.ಕೋಟೇಶ್ವರ ದೇವಸ್ಥಾನದ ಬಳಿ ಅವರ ದ್ವಿಚಕ್ರ ವಾಹನ ಹಾಗೂ ಕೋಟಿ ತೀರ್ಥ ಕೊಳದ ಮೆಟ್ಟಿಲುಗಳ ಮೇಲೆ ಚಪ್ಪಲಿ ಮತ್ತು ಟೋಪಿ ಪತ್ತೆಯಾಗಿತ್ತು.
ಬುಧವಾರ ಬೆಳಿಗ್ಗೆ ಸ್ಥಳೀಯ ಈಜುಗಾರರಾದ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ ಹಾಗೂ ಸತ್ಯನಾರಾಯಣ ಮಂಜ ಅವರು ಬೋಟ್ ಮೂಲಕ ಶೋಧ ನಡೆಸಿ ಮೃತದೇಹ ಪತ್ತೆ ಹಚ್ಚಿದರು.ನಂತರ ಮುಳುಗುತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕೊಳದಿಂದ ಹೊರತೆಗೆದರು.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.




