(ನ್ಯೂಸ್ ಕಡಬ) newskadaba.com, ಜು.10 :ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 1.3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ವಿಶ್ವದ ಅತಿದೊಡ್ಡ ಹಾವು ಸಾಕಣೆ ಕೇಂದ್ರಗಳಿರುವ ಈ ಪ್ರಾಂತ್ಯದಲ್ಲಿ ಪ್ರವಾಹದ ನೀರು ನುಗ್ಗಿದ ಪರಿಣಾಮ, 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಪಂಜರಗಳಿಂದ ತಪ್ಪಿಸಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗಿವೆ. ಹೆಂಗ್‌ಝೌ ನಗರದಲ್ಲಿ ಹಾವಿನ ಕಡಿತಕ್ಕೊಳಗಾದ ಮಹಿಳೆಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ಸ್ಥಳೀಯ ಮೃಗಾಲಯದ ಗೋಡೆ ಕುಸಿದು ಜೀಬ್ರಾ, ಹಂದಿ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಣಿಗಳು ಹೊರಬಂದಿದ್ದು, ಅವುಗಳ ಪತ್ತೆ ಕಾರ್ಯ ಮುಂದುವರಿದಿದೆ.ಪರಿಸ್ಥಿತಿ ನಿಯಂತ್ರಿಸಲು ಚೀನಾ ಸರ್ಕಾರ ವಿಶೇಷ ಹಾವು ಹಿಡಿಯುವ ತಜ್ಞರ ತಂಡಗಳನ್ನು ನಿಯೋಜಿಸಿದೆ. 5,700ಕ್ಕೂ ಹೆಚ್ಚು ರಕ್ಷಣಾ ಬೋಟ್‌ಗಳನ್ನು ಬಳಸಲಾಗುತ್ತಿದ್ದು, ಹಾವಿನ ಕಡಿತಕ್ಕೆ ತ್ವರಿತ ಚಿಕಿತ್ಸೆ ನೀಡಲು ತಾತ್ಕಾಲಿಕ ವೈದ್ಯಕೀಯ ಶಿಬಿರ ಹಾಗೂ ಆಂಟಿ-ವೆನಮ್ ಔಷಧಗಳನ್ನು ಸಿದ್ಧವಾಗಿಡಲಾಗಿದೆ.










