ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಕಾಯಕಲ್ಪಕ್ಕೆ ಕೇಂದ್ರದ ಮಹತ್ವದ ಅನುಮೋದನೆ

(ನ್ಯೂಸ್‌ ಕಡಬ) newskadaba.com,  ಜೂ.16 ನವದೆಹಲಿ: ದೇಶದ ಜನನಿಬಿಡ ರೈಲು ನಿಲ್ದಾಣಗಳಾದ ಮಂಗಳೂರು ಸೆಂಟ್ರಲ್, ಬೊರಿವಿಲಿ ಮತ್ತು ಅಂಬಾಲಾಗಳನ್ನು ಆಧುನೀಕರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮರುಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳೂರು ಸೆಂಟ್ರಲ್ ನಿಲ್ದಾಣದ ಪ್ರಮುಖ ಬದಲಾವಣೆಗಳು:

ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚಿಸಲು ಎರಡು ಹೊಸ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಹಾಗೂ ಹಾಲಿ ಇರುವ ಪ್ಲಾಟ್‌ಫಾರ್ಮ್‌ಗಳ ಉನ್ನತೀಕರಣ.6 ಮೀಟರ್ ಅಗಲದ ಹೊಸ ಪಾದಚಾರಿ ಮೇಲ್ಸೇತುವೆ ,ಸುಧಾರಿತ ಶೆಲ್ಟರ್‌ಗಳು, ಹೆಚ್ಚುವರಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳ ಅಳವಡಿಕೆ.

ಪ್ರಸ್ತುತ ಮಂಗಳೂರು ಸೆಂಟ್ರಲ್ ನಿಲ್ದಾಣವು ಪ್ರತಿದಿನ 28,000ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 50 ರೈಲುಗಳ ಸಂಚಾರವನ್ನು ನಿರ್ವಹಿಸುತ್ತಿದೆ. ಭವಿಷ್ಯದ ದಟ್ಟಣೆಯನ್ನು ನಿಯಂತ್ರಿಸಲು ಈ ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆ ಅತ್ಯಗತ್ಯವಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

Scroll to Top