(ನ್ಯೂಸ್ ಕಡಬ) newskadaba.com, ಜು.09 : ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ನೀರಿನಲ್ಲಿ ತೇಲಿ ಹೋಗಿವೆ.
ಪಾತಾಳಗಂಗಾ ನದಿಯ ಪ್ರವಾಹದ ಹೊಡೆತಕ್ಕೆ ಸಿಲುಕಿ HPCL ಬಾಟ್ಲಿಂಗ್ ಘಟಕದ ಆವರಣದಲ್ಲಿದ್ದ ಗ್ಯಾಸ್ ತುಂಬಿದ ಹಾಗೂ ಖಾಲಿ ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ನೂರಾರು ಸಿಲಿಂಡರ್‌ಗಳು ತೇಲುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಅನಿರೀಕ್ಷಿತ ಘಟನೆಯಿಂದಾಗಿ ಮುಂಬರುವ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ನದಿ ದಡಕ್ಕೆ ಬಂದಿರುವ ಯಾವುದೇ ಸಿಲಿಂಡರ್‌ಗಳ ಹತ್ತಿರ ಹೋಗಬಾರದು, ಮುಟ್ಟಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಎಚ್ಚರಿಸಲಾಗಿದೆ.
ಸದ್ಯ ಸಂಬಂಧಿತ ಇಲಾಖೆ ಹಾಗೂ ಹೆಚ್‌ಪಿಸಿಎಲ್ ಅಧಿಕಾರಿಗಳು ಜಂಟಿಯಾಗಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ತೇಲಿ ಹೋಗಿರುವ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.









