ಬ್ರೇಕಿಂಗ್: ಮಳೆಗಾಲ ಮುಗಿಯುವವರೆಗೆ ಆಗುಂಬೆ ಘಾಟ್‌ನಲ್ಲಿ ಹೆವಿ ವೆಹಿಕಲ್ಸ್ ಬ್ಯಾನ್!

(ನ್ಯೂಸ್‌ ಕಡಬ) newskadaba.com,   ಜೂ. 12:ಮಳೆಗಾಲದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗುಂಬೆ ಘಾಟ್‌ನಲ್ಲಿ (ರಾಷ್ಟ್ರೀಯ ಹೆದ್ದಾರಿ-169ಎ) ಇದೇ ಜೂನ್ 15 ರಿಂದ ಮಳೆಗಾಲ ಮುಗಿಯುವವರೆಗೂ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಹುಲಿಕಲ್ ಘಾಟಿಯಲ್ಲಿ ಭೂಕುಸಿತದ ನಂತರ ನಡೆಯುತ್ತಿರುವ ದುರಸ್ತಿ ಕಾಮಗಾರಿ ಪೂರ್ಣಗೊಳ್ಳದ ಕಾರಣ, ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ನಾಗರಿಕರು ತುರ್ತು ಚಿಕಿತ್ಸೆಗಾಗಿ ಮಣಿಪಾಲ್, ಉಡುಪಿ, ಮಂಗಳೂರಿಗೆ ತೆರಳಲು ಈ ರಸ್ತೆ ಪ್ರಮುಖ ಸಂಪರ್ಕವಾಗಿದೆ.

ಒಂದು ವೇಳೆ ಘಾಟ್ ಸಂಪೂರ್ಣ ಬಂದ್ ಆದಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದ್ದು, ಇದನ್ನು ತಡೆಯಲು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

Scroll to Top