(ನ್ಯೂಸ್ ಕಡಬ) newskadaba.com, ಜೂ.05: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಜೊತೆಗೆ ಭಾರತ ಹಾಗೂ ಅಮೆರಿಕ ನಡುವೆ ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದ ಆಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವೈಟ್‌ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಶೀಘ್ರದಲ್ಲೇ ಈ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರೆ ತುಂಬಾ ಇಷ್ಟ. ಅವರು ನನ್ನ ಉತ್ತಮ ಸ್ನೇಹಿತರೂ ಹೌದು. ನಮ್ಮಿಬ್ಬರ ಮಧ್ಯೆ ಉತ್ತಮ ಒಡನಾಟ ಹಾಗೂ ಸಂಬಂಧವಿದೆ. ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಈ ಒಪ್ಪಂದ ಬಹುಮುಖ್ಯ ಪಾತ್ರ ವಹಿಸುತ್ತದೆ” ಎಂದು ಹೇಳಿದರು.
“ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಕಳೆದ ಹಲವು ವರ್ಷಗಳಿಂದ ಭಾರೀ ಪ್ರಮಾಣದ ಸುಂಕವನ್ನ ವಿಧಿಸುತ್ತಿದೆ. ಆದರೆ ಅಮೆರಿಕದ ಮಾರುಕಟ್ಟೆಯಿಂದ ತನ್ನ ಉತ್ಪನ್ನಗಳಿಗೆ ಹೆಚ್ಚಿನ ಲಾಭವನ್ನ ಪಡೆದುಕೊಳ್ಳುತ್ತಿದೆ. ಭಾರತ ಅಮೆರಿಕದ ಉದಾರತೆಯನ್ನ ದುರುಪಯೋಗ ಪಡಿಸಿಕೊಂಡಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವ್ಯವಹಾರದ ಚಿತ್ರಣ ಬದಲಾಗಿದೆ. ಪ್ರಸ್ತುತ ಆರ್ಥಿಕ ಬಾಂಧವ್ಯದಿಂದ ಅಮೆರಿಕಕ್ಕೆ ಹೆಚ್ಚಿನ ಲಾಭವಾಗುತ್ತಿದೆ” ಎಂದರು.









