ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಮೃತ್ಯು



(ನ್ಯೂಸ್‌ ಕಡಬ) newskadaba.com,  ಜೂ.05: ಇಂದು ಬೆಳಗ್ಗೆ ಕೂಡ ಕಾಡಾನೆ ತುಳಿತಕ್ಕೆ ನಿವೃತ್ತ ಐಜಿಪಿ ಪತ್ನಿ ಸಾವನ್ನಪ್ಪಿದ್ದ ಘಟನೆ ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮ ಪಂಚಾಯತಿ ಸಮೀಪದ ಕೊಣ್ಣನಕಟ್ಟೆ ಗ್ರಾಮದಲ್ಲಿ ನಡೆದಿದೆ.







ಕಾಡಾನೆ ತುಳಿತಕ್ಕೆ ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (58) ಸಾವಿಗೀಡಾಗಿದ್ದಾರೆ.






ಸಂಧ್ಯಾ ಅವರು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ಹಾಗೇ ತೋಟದ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನ ಮೇಲ್ವಿಚಾರಣೆ ಮಾಡಿಕೊಂಡು ವಾಪಸ್‌ ಮನೆಗೆ ಮರಳುತ್ತಿದ್ದರು. ಈ ವೇಳೆ ಏಕಾಏಕಿ ಎರಗಿದ ಕಾಡಾನೆ ಸಂಧ್ಯಾ ಅವರ ಮೇಲೆ ದಾಳಿ ನಡೆಸಿದೆ.

ಆನೆ ದಾಳಿ ವೇಳೆ ಸಂಧ್ಯಾ ಅವರ ಕಾಲು ಮುರಿದು ಗಂಭೀರ ಗಾಯಗೊಂಡಿದ್ದಾರೆ. ಇದನ್ನು ಕಂಡು ತೋಟದ ಕಾರ್ಮಿಕರು ಕಿರುಚಾಡುತ್ತಿದ್ದಂತೆ, ಅವರ ಮೇಲೂ ದಾಳಿ ನಡೆಸಲು ಮುಂದಾಗಿದೆ. ಆನೆ ದಾಂಗುಡಿ ಇಡುತ್ತಿರುವುದನ್ನು ಕಂಡ ಕಾರ್ಮಿಕರು ಸಿಕ್ಕಸಿಕ್ಕ ಕಡೆಗೆ ಓಡಿಹೋಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನ ಕುಟುಂಬಸ್ಥರು ಗೋಣಿಕೊಪ್ಪದ ಲೋಪಮುದ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ‌ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಗಳ ವಿರುದ್ಧ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.

error: Content is protected !!
Scroll to Top