ಇಸ್ರೇಲ್ ಪ್ರಯಾಣಿಕರಿಗೆ ಸಂಕಷ್ಟ: ಮೇ 31ರವರೆಗೆ ವಿಮಾನ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ



(ನ್ಯೂಸ್ಕಡಬ) newskadaba.com,  ಎ.06: ಮೇ 31ರ ವರೆಗೆ ಹೊಸದಿಲ್ಲಿ-ಟೆಲ್ ಅವಿವ್ ಮಾರ್ಗದಲ್ಲಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾದ ಕಾರ್ಯನಿರ್ವಹಣಾಧಿಕಾರಿ ರವಿವಾರ ದೃಢಪಡಿಸಿದ್ದಾರೆ. ಹೆಚ್ಚಿನ ಪ್ರಮುಖ ವಿಮಾನ ಯಾನ ಸಂಸ್ಥೆಗಳು ಟೆಲ್ ಅವೀವ್ ಮಾರ್ಗದಲ್ಲಿ ತಮ್ಮ ವಿಮಾನಗಳ ಸಂಚಾರಗಳನ್ನು ರದ್ದುಗೊಳಿಸಿವೆ. ಆದರೆ, ಇಐ ಎಐ, ಇಸ್ರಾಏರ್, ಆರ್ಕಿಯಾ ಹಾಗೂ ಏರ್ ಹೈಫಾದಂತಹ ಇಸ್ರೇಲ್‌ನ ವಿಮಾನ ಯಾನ ಸಂಸ್ಥೆಗಳ ವಿಮಾನಗಳು ಮಾತ್ರ ತೀವ್ರ ನಿರ್ಬಂಧಗಳ ಅಡಿಯಲ್ಲಿ ಸಂಚರಿಸುತ್ತಿವೆ.





ವಿಮಾನಗಳ ಸಂಚಾರ ಸ್ಥಗಿತಗೊಳಿಸಿರುವುದು ಇಸ್ರೇಲ್‌ನಲ್ಲಿ ವಾಸಿಸುವ 40 ಸಾವಿರಕ್ಕೂ ಅಧಿಕ ಭಾರತೀಯರಲ್ಲಿ ತೀವ್ರ ಕಳವಳ ಉಂಟು ಮಾಡಿದೆ. ಟೆಲ್‌ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿವಿಧ ಮಾರ್ಗಗಳ ಮೂಲಕ ಪ್ರಯಾಣಿಸಲು ಬಯಸುವವರಿಗೆ ನೆರವು ನೀಡುತ್ತಿದೆ. ಅದು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಹಾಯಕ್ಕಾಗಿ 24 x7 ಸಹಾಯವಾಣಿಯನ್ನು ಆರಂಭಿಸಿದೆ.






ಜನರ ವಿವರಗಳನ್ನು ಸಂಗ್ರಹಿಸಲು ನೋಂದಣಿ ಆರಂಭಿಸಿದೆ. ವಾರಕ್ಕೆ ನಾಲ್ಕು ವಿಮಾನಗಳ ಸಂಚಾರದೊಂದಿಗೆ ಹೊಸದಿಲ್ಲಿ ಹಾಗೂ ಟೆಲ್‌ಅವಿವ್ ನಡುವೆ ಜನವರಿ 1ರಂದು ವಿಮಾನ ಸಂಚಾರ ಮರು ಆರಂಭಿಸಲಾಗಿತ್ತು. ಆದರೆ, ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ವಿಮಾನಗಳ ಸಂಚಾರಕ್ಕೆ ಮತ್ತೆ ಅಡ್ಡಿ ಉಂಟಾಗಿತ್ತು.

error: Content is protected !!
Scroll to Top