ಹಡಗಿನಲ್ಲಿ ಅಗ್ನಿದುರಂತ- ಗಾಯಾಳುಗಳು ಮಂಗಳೂರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಜೂ. 10. ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿ ಬೃಹತ್ ಕಂಟೈನರ್ ಹಡಗಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಯಗೊಂಡಿರುವ ಹಡಗಿನ ಆರು ಮಂದಿ ಸಿಬ್ಬಂದಿಗಳನ್ನು ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೇರೀತಿ ರಕ್ಷಿಸಲ್ಪಟ್ಟ ಉಳಿದ 12 ಮಂದಿಯನ್ನೂ ಮಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುರಂತಕ್ಕೀಡಾದ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಹೊತ್ತ ಐಎನ್ಎಸ್ ಸೂರತ್ ಸೋಮವಾರದಂದು ತಡರಾತ್ರಿ ಪಣಂಬೂರಿನ ಹೊಸ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಆಗಮಿಸಿದೆ. ಅಲ್ಲಿಂದ ಆರು ಮಂದಿ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 12 ಮಂದಿಗೆ ನಗರದ ಹೊಟೇಲ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುವುದಾಗಿ ತಿಳಿದುಬಂದಿದೆ.

ಗಾಯಗೊಂಡವರನ್ನು ಚೀನಾ ಮೂಲದ ಲೂ ಯಾನ್ಲಿ, ಇಂಡೋನೇಷ್ಯಾದ ಸೋನಿಟೂರ್ ಹೆನಿ, ಚೀನಾದ ಕ್ಸೂ ಪಬೋ, ಗೋ ಲೆನಿನೊ, ಮ್ಯಾನ್ಮರ್ ನ ಥೆನ್ ಥಾನ್ ತ್ವಾಯ್, ಕಿ ಝಾವ್ ತ್ವೂ ಎಂದು ಗುರುತಿಸಲಾಗಿದೆ. ಉಳಿದ 12 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ತೈವಾನ್ ನ ಯು ಬೊ ಫಾಂಗ್, ಮ್ಯಾನ್ಮರ್ ನ ಸಾನ್ ವಿನ್, ಇಂಡೋನೇಶ್ಯದ ಝೈನುಲ್ ಆಬಿದಿನ್ ಮತ್ತು ತೈವಾನ್ ನ ಸಿಹ್ ಚಾಯ್ ವಾನ್ ಎಂಬವರು ಕಡಲಿನಲ್ಲಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ
ಕಾರ್ಯಾಚರಣೆ ಮುಂದುವರಿದಿದೆ.

Scroll to Top