ಖ್ಯಾತ ಬ್ರಿಟಿಷ್ ಸಾಹಿತಿ, ಮಾಜಿ ಸಂಸದ ಜೆಫ್ರಿ ಆರ್ಚರ್ ಇನ್ನಿಲ್ಲ!

(ನ್ಯೂಸ್‌ ಕಡಬ) newskadaba.com, ಅ.06 . ಬ್ರಿಟನ್‌ನ ಖ್ಯಾತ ಸಾಹಿತಿ ಹಾಗೂ ಮಾಜಿ ಸಂಸದ ಜೆಫ್ರಿ ಆರ್ಚರ್ ಅವರು ಅಕ್ಟೋಬರ್ 5ರಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಪ್ರಕಾಶಕ ಸಂಸ್ಥೆ ಹಾರ್ಪರ್‌ಕಾಲಿನ್ಸ್ ತಿಳಿಸಿದೆ.5 ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರ ಕೃತಿಗಳು 100ಕ್ಕೂ ಹೆಚ್ಚು ದೇಶಗಳಲ್ಲಿ 30 ಕೋಟಿಗೂ ಅಧಿಕ ಪ್ರತಿಗಳು ಮಾರಾಟವಾಗಿವೆ.

1976ರ ‘Not a Penny More, Not a Penny Less’ ಮೂಲಕ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ ಅವರು, ‘Kane & Abel’ ಕಾದಂಬರಿಯ ಮೂಲಕ ಜಾಗತಿಕ ಖ್ಯಾತಿ ಗಳಿಸಿದರು. ಜೈಲುವಾಸದ ಅನುಭವದ ಮೇಲೆ ‘A Prison Diary’ ರಚಿಸಿದ್ದರು.

ತಮ್ಮ 29ನೇ ವಯಸ್ಸಿನಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದ ಅವರು, ಮಾರ್ಗರೇಟ್ ಥ್ಯಾಚರ್ ಸರ್ಕಾರದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ್ದರು. 2001ರಲ್ಲಿ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು.ಅವರ 31ನೇ ಹಾಗೂ ಕೊನೆಯ ಕಾದಂಬರಿ ‘Adam & Eve’ ಅಕ್ಟೋಬರ್ 6ರಂದು ಬಿಡುಗಡೆಯಾಗಬೇಕಿತ್ತು. ಆದರೆ ಪುಸ್ತಕ ಲೋಕಾರ್ಪಣೆಗೊಳ್ಳುವ ಕೆಲವೇ ಗಂಟೆಗಳ ಮುನ್ನ ಅವರು ಕೊನೆಯುಸಿರೆಳೆದಿದ್ದಾರೆ.

Scroll to Top