ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ: ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ಮಿಸ್ಸಿಂಗ್

(ನ್ಯೂಸ್ ಕಡಬ) newskadaba.com ಕಡಬ,ಜೂ.02: ಈಶಾನ್ಯ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಈ ನಡುವೆ ಉತ್ತರ ಸಿಕ್ಕಿಂನಲ್ಲಿ ನಿರಂತರ ಮಳೆಯಿಂದಾಗಿ ಮಿಲಿಟರಿ ಶಿಬಿರಗಳಿರುವ‌ ಛಾತೆನ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಮೂವರು ಸೈನಿಕರು ದುರ್ಮರಣಕ್ಕೀಡಾಗಿದ್ದಾರೆ.

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 6 ಮಂದಿ ಸೈನಿಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಸೈನಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದುವರೆಗಿನ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸೈನಿಕರಾದ ಹವ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ ನಾಯಕ್ ಮುನೀಶ್ ಠಾಕೂರ್ ಮತ್ತು ಪೋರ್ಟರ್ ಅಭಿಷೇಕ್ ಲಖಾಡ ಅವರ ಮೃತದೇಹಗಳು ಪತ್ತೆಯಾಗಿವೆ. ರಕ್ಷಿಸಲಾದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಂನಲ್ಲಿ ನಿರಂತರ ಮಳೆಯಿಂದ ಮತ್ತಷ್ಟು ಭೂಕುಸಿತವಾಗುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಸೇನೆ ಕಳವಳ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿರುವ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.

Scroll to Top