(ನ್ಯೂಸ್ ಕಡಬ) newskadaba.com ಮಂಗಳೂರು, ಜ.18. ಕಳೆದ ಹಲವಾರು ಸಮಯಗಳಿಂದ ಪದೇ ಪದೇ ಒಂದಲ್ಲ ಒಂದು ರೀತಿಯ ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಮತ್ತೊಂದು ಎಡವಟ್ಟು ಸಂಭವಿಸಿದ್ದು, ತಡವಾಗಿ ಸುದ್ದಿಯಾಗಿದೆ.
ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್ ಒಬ್ಬರು ಕಂಠ ಪೂರ್ತಿ ಕುಡಿದು ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮಂಗಳೂರು – ದುಬೈ ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬೆಳಗಾಗುವ ತನಕ ನಿಲ್ದಾಣದಲ್ಲೇ ತೂಕಡಿಸುತ್ತ ಕುಳಿತುಕೊಳ್ಳ ಬೇಕಾದ ಅನಿವಾರ್ಯತೆ ಉಂಟಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯರಾತ್ರಿ ಮಂಗಳೂರಿನಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ದುಬೈಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನದ ಮುಖ್ಯ ಮಹಿಳಾ ಪೈಲಟ್ ಅತಿಯಾದ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಪರಿಣಾಮ ಐದು ತಾಸು ತಡವಾಗಿ ವಿಮಾನ ಟೇಕ್‌ಆಫ್ ಆದ ಆತಂಕಕಾರಿ ಘಟನೆ ಸಂಭವಿಸಿದೆ. ಸುಮಾರು ಐದು ಗಂಟೆಗಳ ಅನಂತರ ಬದಲಿ ಪೈಲಟ್‌ನ ವ್ಯವಸ್ಥೆಯೊಂದಿಗೆ ವಿಮಾನ ಟೇಕ್‌ಆಫ್ ಆಗಿದೆ.
ಮಂಗಳವಾರ ರಾತ್ರಿ 12.40ಕ್ಕೆ ದುಬೈಗೆ ಹೊರಡಬೇಕಿದ್ದ ವಿಮಾನದ 180 ಮಂದಿ ಪ್ರಯಾಣಿಕರು ಬೋರ್ಡಿಂಗ್ ಆಗುವುದಕ್ಕೆ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಮುಗಿಸಿ ಕಾದು ಕುಳಿತಿದ್ದರು. ನಿಗದಿತ ಸಮಯಕ್ಕೆ ಹಾರಾಡುವುದಕ್ಕೆ ರನ್‌ವೇನಲ್ಲಿಯೂ ಎಲ್ಲ ರೀತಿಯ ತಯಾರಿ ನಡೆಸಲಾಗಿತ್ತು. ಪ್ರಯಾಣಿಕರು ಬೋರ್ಡಿಂಗ್ ಆಗುವುದಕ್ಕೂ ಎರಡು ತಾಸು ಮೊದಲು ಆ ವಿಮಾನದ ಪೈಲಟ್ ಅನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಪ್ರಕಾರ, ಮಂಗಳೂರು-ದುಬೈ ವಿಮಾನವನ್ನು ಹಾರಾಡಿಸಬೇಕಾಗಿದ್ದ ಟರ್ಕಿ ದೇಶದ ಮುಖ್ಯ ಮಹಿಳಾ ಪೈಲಟನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾದಾಗ ಆಕೆಯು ಕಂಠಪೂರ್ತಿ ಕುಡಿದಿರುವ ವಿಚಾರ ವೈದ್ಯಾಧಿಕಾರಿಗಳ ಗಮನಕ್ಕೆ ಬಂದಿದೆ. ತನ್ನ ಮೇಲೆ ನಿಯಂತ್ರಣವಿಲ್ಲದಷ್ಟರ ಮಟ್ಟಿಗೆ ಮದ್ಯ ಸೇವನೆ ಮಾಡಿರುವುದು ಗೊತ್ತಾದ ತಕ್ಷಣ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಸಂಬಂಧಪಟ್ಟ ಅಧಿಕಾರಿಗಳು, ಈ ಮೊದಲು ನಿಗದಿಪಡಿಸಿದ್ದ ಮಂಗಳೂರು-ದುಬೈ ವಿಮಾನ ಹಾರಾಟದ ವೇಳೆಯನ್ನು ರದ್ದುಪಡಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.