(ನ್ಯೂಸ್ ಕಡಬ) newskadaba.com ಕಡಬ, ಜ.17. ಕಳವು ಪ್ರಕರಣವೊಂದರಲ್ಲಿ ಕೇರಳದ ಕಣ್ಣೂರು ಸಬ್ ಜೈಲಿನಲ್ಲಿ ಬಂಧಿಯಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸರನ್ನು ತಳ್ಳಿಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ಬುಧವಾರದಂದು ಕೊಯಿಲದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಕೇರಳದಿಂದ ತಪ್ಪಿಸಿ ಬಂದು ಕೊಯಿಲ ಗ್ರಾಮದ ಎಲ್ಯಂಗಳ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಅವಿತು ಕುಳಿತಿದ್ದ ಶಿಹಾಬುದ್ದೀನ್(22) ಎಂದು ಗುರುತಿಸಲಾಗಿದೆ. ಈತ 2017 ಡಿಸೆಂಬರ್ 25 ರಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಜೀಪಿನಲ್ಲಿದ್ದ ಪೊಲೀಸರನ್ನು ತಳ್ಳಿ ಪರಾರಿಯಾಗಿ ಕಡಬ ಪರಿಸರದಲ್ಲಿ ಅವಿತು ಕುಳಿತಿದ್ದಾನೆ ಎಂದು ಕಣ್ಣೂರು ಸ್ಪೆಷಲ್ ಬ್ರಾಂಚ್ ಸಬ್ ಇನ್ಸ್‌ಪೆಕ್ಟರ್ ಎ.ವಿ. ದಿನೇಶನ್ ಹಾಗೂ ಸಿಬ್ಬಂದಿಗಳು ಕಡಬಕ್ಕೆ ಆಗಮಿಸಿ ಕಡಬ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಗಳಾದ ಶಿವಪ್ರಸಾದ್, ತಾರಾನಾಥ್, ಕನಕರಾಜ್, ಮಹಿಳಾ ಸಿಬ್ಬಂದಿ ಚಂದ್ರಿಕಾ ಪಾಲ್ಗೊಂಡಿದ್ದರು.