(ನ್ಯೂಸ್ ಕಡಬ) newskadaba.com ಮಂಗಳೂರು, ನ.20. ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ. ಮಂಗಳೂರು ಸುರಕ್ಷಿತವಾಗಿದ್ದು, ಮಂಗಳೂರಿಗೆ ನೈಸರ್ಗಿಕವಾಗಿ ಯಾವುದೇ ಅಪಾಯವಿರುವುದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ. ಸಿ.ಎನ್. ಪ್ರಭು ಹಾಗೂ ಭಾರತೀಯ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ, ವಿಜ್ಞಾನಿ ಬಿ.ಪುಟ್ಟಣ್ಣ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಮಳೆಯಾದುದರಿಂದ ಮಂಗಳೂರು ಮುಳುಗಡೆಯಾಗುತ್ತದೆ ಎಂಬ ವದಂತಿ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆ ವಿಜಯ ಕರ್ನಾಟಕ ಅವರನ್ನು ಮಾತನಾಡಿಸಿದಾಗ ಈ ವಿಷಯವನ್ನು ತಿಳಿಸಿದ್ದಾರೆ. ಮಂಗಳೂರು ಮುಳುಗಡೆಯಾಗುತ್ತದೆ ಎನ್ನುವ ಬಗ್ಗೆ ನಾಸಾ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ. ಇದೊಂದು ಆಧಾರ ರಹಿತ ವದಂತಿಯಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ. ಸಿ.ಎನ್. ಪ್ರಭು ಹೇಳಿದ್ದಾರೆ.
ನಮ್ಮ ದೇಶಕ್ಕೆ ಯಾವುದೇ ರೀತಿಯ ಅಪಾಯವಿದ್ದಲ್ಲಿ ನಮ್ಮ ವಿಜ್ಞಾನಿಗಳು, ಸರಕಾರ ಸುಮ್ಮನಿರುತ್ತದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ. ಕೊಚ್ಚಿ, ಮುಂಬಯಿ ನಗರಗಳು ಮಂಗಳೂರಿಗಿಂತಲೂ ಸಮುದ್ರ ಮಟ್ಟಕ್ಕಿಂತ ಕಡಿಮೆ ಎತ್ತರದಲ್ಲಿದೆ. ಮಾಲ್ಡೀವ್ಸ್‌ನಂತಹ ದ್ವೀಪಗಳು ಒಂದೆರಡು ಮೀಟರ್ ಎತ್ತರದಲ್ಲಿರುವಾಗ ಮಂಗಳೂರು ಮಾತ್ರ ಮೊದಲು ಮುಳುಗಲು ಸಾಧ್ಯವೇ ಇಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಒಟ್ಟಿನಲ್ಲಿ ಕರಾವಳಿಯಲ್ಲಿ ಮಾತ್ರ ಮಂಗಳೂರು ಮುಳುಗಡೆಯ ವಿಚಾರ ಆತಂಕವನ್ನು ಸೃಷ್ಟಿಸಿರುವುದು ಸುಳ್ಳಲ್ಲ.